ಬಿಹಾರ ಯುಟ್ಯೂಬರ್ ವಿರುದ್ಧ ಎನ್‌ಎಸ್‌ಎ ಹೇರಿಕೆ ಏಕೆ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್
ವಲಸಿಗ ಕಾರ್ಮಿಕರ ಮೇಲಿನ ದಾಳಿಗಳ ನಕಲಿ ವೀಡಿಯೋ ಪ್ರಕರಣ

ಹೊಸದಿಲ್ಲಿ: ತಮಿಳುನಾಡಿನಲ್ಲಿ ವಲಸಿಗ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿಕೊಂಡು ಘಟನೆಯ ನಕಲಿ ವೀಡಿಯೋಗಳನ್ನು ಶೇರ್ ಮಾಡಿದ್ದಾರೆನ್ನಲಾದ ಬಿಹಾರ ಮೂಲದ ಯುಟ್ಯೂಬರ್ ಮನೀಷ್ ಕಶ್ಯಪ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಿದ ತಮಿಳುನಾಡು ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಇಂದು ಪ್ರಶ್ನಿಸಿದೆ.
"ಮಿ. ಸಿಬಲ್, ಇದಕ್ಕಾಗಿ ಎನ್‌ಎಸ್‌ಎ ಏಕೆ? ಈ ವ್ಯಕ್ತಿಯ ವಿರುದ್ಧ ಏಕೆ ದ್ವೇಷ?," ಎಂದು ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್ "ಅವನೇನು ಮಾಡಿದ್ದಾನೆ ನೋಡಿ. ತಮಿಳುನಾಡಿನಲ್ಲಿ ಬಿಹಾರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ನಕಲಿ ವೀಡಿಯೋಗಳನ್ನು ಮಾಡಿದ್ದಾನೆ. ಅವನಿಗೆ 60 ಲಕ್ಷ ಫಾಲೋವರ್ಸ್ ಇದ್ದಾರೆ. ಅವನೊಬ್ಬ ರಾಜಕಾರಣಿ ಅವನು ಚುನಾವಣೆ ಸ್ಪರ್ಧಿಸಿದ್ದ. ಅವನು ಪತ್ರಕರ್ತನಲ್ಲ," ಎಂದು ಹೇಳಿದರು.
ತಮಿಳುನಾಡು ಮತ್ತು ಬಿಹಾರ ರಾಜ್ಯಗಳೆರಡರಲ್ಲೂ ಕಶ್ಯಪ್ ಹಲವು ಎಫ್‌ಐಆರ್‌ಗಳನ್ನು ಎದುರಿಸುತ್ತಿದ್ದಾನೆ. ಬಿಹಾರದ ವಕೀಲರು ಮನೀಷ್ ಕಶ್ಯಪ್ ನನ್ನು ʻʻಸರಣಿ ತಪ್ಪು ಮಾಡಿದವ" ಎಂದು ಬಣ್ಣಿಸಿದರಲ್ಲದೆ ಆತ ವೀಡಿಯೋಗಳನ್ನು ಮಾತ್ರ ಮಾಡುವುದಿಲ್ಲ, ಆತನ ವಿರುದ್ಧ ಸೆಕ್ಷನ್ 307 ಅನ್ವಯ ಪ್ರಕರಣ ಸಹಿತ ಗಂಭೀರ ಪ್ರಕರಣಗಳಿವೆ," ಎಂದು ಹೇಳಿದರು.
ಆತನ ವಿರುದ್ಧ ಹಲವು ಎಫ್‌ಐಆರ್‌ಗಳಿರುವುದರಿಂದ ಆತನನ್ನು ಮದುರೈ ಕಾರಾಗೃಹದಿಂದ ಬೇರೆ ಕಾರಾಗೃಹಕ್ಕೆ ವರ್ಗಾಯಿಸದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಎಪ್ರಿಲ್ 6 ರಂದು ಬಂಧಿಸಲ್ಪಟ್ಟಿದ್ದ ಮನೀಷ್ ಕಶ್ಯಪ್ ವಿರುದ್ಧ ತಮಿಳುನಾಡು ಸರ್ಕಾರ ಎನ್‌ಎಸ್‌ಎ ಹೇರಿತ್ತು.
ರಾಜ್ಯದಲ್ಲಿ ವಲಸಿಗ ಕಾರ್ಮಿಕರ ದಾಳಿಗಳ ಕುರಿತ ಊಹಾಪೋಹಗಳಿಂದ ಹಲವು ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದರಲ್ಲದೆ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಯಾವುದೇ ದಾಳಿಗಳಾಗಿಲ್ಲ, ವಲಸಿಗ ಕಾರ್ಮಿಕರಿಗೆ ರಕ್ಷಣೆಯಿದೆ ಎಂದು ಸ್ಪಷ್ಟಪಡಿಸಿತ್ತು.







