ಕೋವಿಡ್ ಇನ್ನೂ ಮುಗಿದಿಲ್ಲ: ಹೆಚ್ಚಿನ ನಿಗಾ ವಹಿಸುವಂತೆ ಕರ್ನಾಟಕ ಸಹಿತ 8 ರಾಜ್ಯಗಳಿಗೆ ಕೇಂದ್ರದ ಸೂಚನೆ

ಹೊಸದಿಲ್ಲಿ: ಏರುತ್ತಿರುವ ಪಾಸಿಟಿವಿಟಿ ದರದ ನಡುವೆ ಕೋವಿಡ್-19 ಪರಿಸ್ಥಿತಿಯ ಮೇಲೆ ನಿಗಾ ಇಡುವಂತೆ ಎಂಟು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.
"ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ, ನಾವು ಎಚ್ಚರಿಕೆಯಿಂದಿರಬೇಕು," ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಂಟು ರಾಜ್ಯಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಕೇರಳ, ಹರ್ಯಾಣ ಮತ್ತು ದಿಲ್ಲಿಗೆ ಅವರು ಪತ್ರ ಬರೆದಿದ್ದಾರೆ.
ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವುಗಳು ಕಡಿಮೆಯಾಗಿದ್ದರೂ ಸ್ಥಳೀಯವಾಗಿ ಸೋಂಕು ಹರಡಿರುವ ಸಾಧ್ಯತೆಯನ್ನು ಇದು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಪಾಸಿಟಿವ್ ಮಾದರಿಗಳನ್ನು ಪ್ರಮುಖವಾಗಿ ಒಂದು ಪ್ರದೇಶದಲ್ಲಿ ಹಲವು ಪ್ರಕರಣಗಳು ಪತ್ತೆಯಾಗಿದ್ದರೆ ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸುವಂತೆಯೂ ಕೇಂದ್ರ ಸೂಚಿಸಿದೆ.
ಉತ್ತರ ಪ್ರದೇಶದಲ್ಲಿ ಒಂದು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ. 10ಕ್ಕಿಂತ ಅಧಿಕವಾಗಿದ್ದರೆ, ತಮಿಳುನಾಡಿನಲ್ಲಿ 11 ಜಿಲ್ಲೆಗಳು, ರಾಜಸ್ಥಾನದಲ್ಲಿ 6, ಮಹಾರಾಷ್ಟ್ರದಲ್ಲಿ 8, ಕೇರಳದಲ್ಲಿ 14, ಹರ್ಯಾಣಾದಲ್ಲಿ 12 ಮತ್ತು ದಿಲ್ಲಿಯಲ್ಲಿ 11 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ 10ಕ್ಕಿಂತ ಅಧಿಕವಾಗಿದೆ.







