ಉಡುಪಿ: ಶಿಕ್ಷಕ ದಂಪತಿಯ ಮಗಳು ಜೆಸ್ವಿತಾ ರಾಜ್ಯಕ್ಕೆ ಟಾಪರ್

ಉಡುಪಿ, ಎ.21: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ವಿದ್ಯಾರ್ಥಿನಿ ಜೆಸ್ವಿತಾ ಡಯಾಸ್ ವಿಜ್ಞಾನ ವಿಭಾಗದಲ್ಲಿ 595 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಎರಡನೇ ರ‍್ಯಾಂಕ್ ಮತ್ತು ಜಿಲ್ಲೆಯಲ್ಲಿ ಮೊದಲ ಸ್ಥಾನಿಯಾಗಿ ಮೂಡಿಬಂದಿದ್ದಾರೆ.
ಇವರು ಇಂಗ್ಲಿಷ್ 97, ಸಂಸ್ಕೃತ 100, ಗಣಿತ 99, ಭೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 100, ಕಂಪ್ಯೂಟರ್‌ನಲ್ಲಿ 100 ಅಂಕಗಳನ್ನು ಪಡೆದಿದ್ದಾರೆ.
ಬಾರಕೂರು ಬೆಣ್ಣೆಕುದ್ರು ನಿವಾಸಿಯಾಗಿರುವ ಇವರ ತಂದೆ ಜೇಮ್ಸ್ ಡಯಸ್ ಕುಂಜಾಲು ವಿಕೆಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾ ಯರಾಗಿದ್ದು, ತಾಯಿ ಹೆಲೆನ್ಸ್ ಅಲೆಕ್ಸ್ ಲೂವಿಸ್ ಬಿದ್ಕಲ್‌ಕಟ್ಟೆಯ ಕೆಪಿಎಸ್ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರ ತಮ್ಮ ಜಸ್ಟನ್ ಡಯಸ್ ಎಸೆಸೆಲ್ಸಿ ಕಲಿಯುತ್ತಿದ್ದಾರೆ.
‘ರ‍್ಯಾಂಕ್ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ನಿರೀಕ್ಷಿಸಿದಕ್ಕಿಂತ ಹೆಚ್ಚು ಅಂಕ ನೋಡಿ ತುಂಬಾ ಖುಷಿಯಾಯಿತು. ಟ್ಯೂಷನ್ ಪಡೆಯದೆ ಮನೆಯಲ್ಲೇ ಓದುತ್ತಿದ್ದೆ.. ನನಗೆ ತಂದೆ ತಾಯಿ, ಕಾಲೇಜಿನವರು ಸಾಕಷ್ಟು ಪ್ರೋತ್ಸಾಹ ನೀಡಿರುವುದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಸಿಇಟಿ ಪರೀಕ್ಷೆ ಬರೆದು ಇಂಜಿನಿಯರಿಂಗ್ ಮಾಡಬೇಕೆಂಬುದು ನನ್ನ ಗುರಿಯಾಗಿದೆ ಎಂದು ಜೆಸ್ವಿತಾ ಡಯಾಸ್ ತಿಳಿಸಿದರು.





