ಪಿಯು ಫಲಿತಾಂಶ: ಮತ್ತೆ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟ ಉಡುಪಿ

ಉಡುಪಿ, ಎ.21: ಶುಕ್ರವಾರ ಪ್ರಕಟಗೊಂಡ 2023ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಸತತ ಎರಡನೇ ವರ್ಷದಲ್ಲೂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದೆ.
ಉಡುಪಿ ಜಿಲ್ಲೆ ಶೇ.95.24 ತೇರ್ಗಡೆಯೊಂದಿಗೆ ಪಕ್ಕದ ದಕ್ಷಿಣ ಕನ್ನಡಕ್ಕಿಂತ ಕೇವಲ ಶೇ.0.09ರಿಂದ ಹಿಂದೆ ಬಿದ್ದು ಎರಡನೇ ಸ್ಥಾನ ಪಡೆಯುವಂತಾಗಿದೆ. ದ.ಕ. ಶೇ.95.33ರ ತೇರ್ಗಡೆಯೊಂದಿಗೆ 2022ರಲ್ಲಿ ಪಡೆದ ರಾಜ್ಯದ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.
2019ರಲ್ಲಿ ರಾಜ್ಯದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದ ಉಡುಪಿ ಮರುವರ್ಷ 2020ರಲ್ಲಿ ದ.ಕ.ದೊಂದಿಗೆ ಅಗ್ರಸ್ಥಾನ ವನ್ನು ಹಂಚಿಕೊಂಡಿತ್ತು. 2021ರಲ್ಲಿ ಕೋವಿಡ್ ಕಾರಣ ಪರೀಕ್ಷಾ ಫಲಿತಾಂಶ ಇದ್ದಿರಲಿಲ್ಲ. 2022ರಲ್ಲಿ ದ.ಕ. ಶೇ.88.02 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಉಡುಪಿ ಶೇ.86.38 ತೇರ್ಗಡೆಯೊಂದಿಗೆ ಎರಡನೇ ಸ್ಥಾನಿಯಾಗಿತ್ತು.
ಜಿಲ್ಲೆಗೆ ನಾಲ್ಕು ರ‍್ಯಾಂಕ್ : ಉಡುಪಿ ಜಿಲ್ಲೆಗೆ ಈ ಬಾರಿ ವಿಜ್ಞಾನ ವಿಭಾಗದಲ್ಲಿ ನಾಲ್ಕು ಟಾಪ್ ರ‍್ಯಾಂಕ್‌ಗಳು ಬಂದಿವೆ. ನಗರದ ಎಂಜಿಎಂ ಕಾಲೇಜಿನ ಸಾತ್ವಿಕ್ ಪದ್ಮನಾಭ ಭಟ್ ಹಾಗೂ ಪಿಪಿಸಿಯ ಜೆಸ್ವಿಟಾ ಡಯಾಸ್ ತಲಾ 595 ಅಂಕಗಳೊಂದಿಗೆ ಎರಡನೇ ರ್ಯಾಂಕ್‌ನ್ನು ಹಂಚಿಕೊಂಡಿದ್ದಾರೆ.
ಕುಂದಾಪುರ ಶ್ರೀವೆಂಕಟರಮಣ ಪಿಯು ಕಾಲೇಜಿನ ನೇಹಾ ಜೆ. ರಾವ್ ಹಾಗೂ ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನ ಸ್ಮಯಾ ಸದಾನಂದ ಮಾಬೆನ್ ತಲಾ 594 ಅಂಕಗಳೊಂದಿಗೆ ಮೂರನೇ ರ‍್ಯಾಂಕ್‌ನ್ನು ಹಂಚಿಕೊಂಡಿದ್ದಾರೆ.
ಪಾಸ್ ಪರ್ಸಂಟೇಜ್: ಹೊಸದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನೇ ಗಣನೆಗೆ ತೆಗೆದುಕೊಂಡರೆ ಈ ಬಾರಿ 14273 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 13594 ಮಂದಿ ತೇರ್ಗಡೆಗೊಂಡು ಶೇ.95.24 ಫಲಿತಾಂಶ ಬಂದಿದೆ. ಇವರೊಂದಿಗೆ ರಿಪೀಟರ್ಸ್ ಹಾಗೂ ಖಾಸಗಿ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡರೆ ಈ ಬಾರಿ ಉಡುಪಿ ಜಿಲ್ಲೆಯಿಂದ ಒಟ್ಟು 15,537 ಮಂದಿ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡವರಲ್ಲಿ 14,253 ಮಂದಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಶೇ.91.74 ಫಲಿತಾಂಶ ದಾಖಲಾಗಿದೆ.
ಈ ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ 7681 ಬಾಲಕರಲ್ಲಿ 6829 ಮಂದಿ (ಶೇ.88.91) ತೇರ್ಗಡೆಗೊಂಡರೆ, 7856 ವಿದ್ಯಾರ್ಥಿನಿಯರಲ್ಲಿ 7424 (ಶೇ.94.50) ಮಂದಿ ತೇರ್ಗಡೆಗೊಂಡಿದ್ದಾರೆ. ನಗರ ಪ್ರದೇಶದ ಶೇ.95.31ರಷ್ಟು ಹಾಗೂ ಗ್ರಾಮೀಣ ಭಾಗದ ಶೇ.95.18ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶದಲಿ ವಿಜ್ಞಾನ ವಿಭಾಗದಲ್ಲಿ ಶೇ.97.84ರಷ್ಟು ಮಂದಿ, ಕಾಮರ್ಸ್ ವಿಭಾಗದಲ್ಲಿ ಶೇ.94.82ರಷ್ಟು ಮಂದಿ ಹಾಗೂ ಕಲಾ ವಿಭಾಗದಲ್ಲಿ ಶೇ.85.41ರಷ್ಟು ಮಂದಿ ಈ ಬಾರಿ ಉತ್ತೀರ್ಣ ಗೊಂಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಬರೆದು ಶೇ.78.91ರಷ್ಟು ಮಂದಿ ಪಾಸಾದರೆ, ಇಂಗ್ಲೀಷ್ ಮಾಧ್ಯಮದಲ್ಲಿ ಬರೆದ ಶೇ.94..5ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 6067 ಮಂದಿ ಪರೀಕ್ಷೆ ಬರೆದಿದ್ದು ಇವರಲ್ಲಿ 5936 ಮಂದಿ ತೇರ್ಗಡೆಗೊಂಡಿದ್ದಾರೆ. 29580 ಮಂದಿ ಬಾಲಕರಲ್ಲಿ 2852 (ಶೇ.96.59) ಮಂದಿ ಹಾಗೂ 3340 ಬಾಲಕಿಯರಲ್ಲಿ 3226 (ಶೇ.96.51) ಮಂದಿ ತೇರ್ಗಡೆಗೊಂಡಿದ್ದಾರೆ. ಈ ವಿಭಾಗದಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆದ ಮೂವರು ವಿದ್ಯಾರ್ಥಿಗಳೂ ತೇರ್ಗಡೆ ಗೊಂಡಿದ್ದಾರೆ.
ಕಾಮರ್ಸ್ ವಿಭಾಗದಲ್ಲಿ 6897 ಮಂದಿ ಪರೀಕ್ಷೆಗೆ ಹಾಜರಾಗಿ 6540 ಮಂದಿ ಉತ್ತೀರ್ಣರಾಗಿದ್ದಾರೆ. 3912 ಬಾಲಕರಲ್ಲಿ 3383 ಮಂದಿ (ಶೇ.86.48), 3712 ಬಾಲಕಿಯರಲ್ಲಿ 3528 ಮಂದಿ (ಶೇ.95.04) ಮಂದಿ ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ 1309 ಮಂದಿ ಪರೀಕ್ಷೆಗೆ ಹಾಜರಾಗಿ 1118 ಮಂದಿ ಪಾಸಾಗಿ ದ್ದಾರೆ. ಪರೀಕ್ಷೆ ಬರೆದ 811 ಬಾಲಕರಲ್ಲಿ 594 ಮಂದಿ (ಶೇ.73.24) ಹಾಗೂ 804 ಮಂದಿ ಬಾಲಕಿಯರಲ್ಲಿ 670 ಮಂದಿ (ಶೇ.83.33) ತೇರ್ಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಶೇ.85.41ರಷ್ಟು ಹಾಗೂ ಪರಿಶಿಷ್ಟ ಪಂಗಡ ಶೇ.90.04ರಷ್ಟು ಮಂದಿ ತೇರ್ಗಡೆಗೊಂಡಿದ್ದಾರೆ. ಪ.ಜಾತಿಯ 939 ಮಂದಿಯಲ್ಲಿ 802 ಹಾಗೂ ಪ.ಪಂಗಡದ 703 ಮಂದಿಯಲ್ಲಿ 633 ಮಂದಿ ತೇರ್ಗಡೆಗೊಂಡಿದ್ದಾರೆ.
ಜಿಲ್ಲೆಯ 23 ಪಿಯು ಕಾಲೇಜುಗಳಿಗೆ ಶೇ.100 ಫಲಿತಾಂಶ
ಈವರೆಗೆ ಇಲಾಖೆಗೆ ಬಂದಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 23 ಕಾಲೇಜುಗಳು ಈ ಬಾರಿ ಶೇ.100 ಫಲಿತಾಂಶ ದಾಖಲಿಸಿವೆ. ಇವುಗಳಲ್ಲಿ ಐದು ಸರಕಾರಿ ಪದವಿ ಪೂರ್ವ ಕಾಲೇಜುಗಳು ಸೇರಿವೆ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ.
ಪೆರ್ಡೂರಿನ ಸರಕಾರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ತಾಲೂಕು ಆರೂರಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಕಾರ್ಕಳ ತಾಲೂಕು ಮಿಯಾರಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಕರ್ಜೆಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಬ್ರಹ್ಮಾವರ ತಾಲೂಕು ಕೊಕ್ಕರ್ಣೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳು ಈ ಬಾರಿ ಶೇ.100 ಫಲಿತಾಂಶವನ್ನು ದಾಖಲಿಸಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ಮಿಯಾರು ಮೊರಾರ್ಜಿ ದೇಸಾಯಿ ಕಾಲೇಜು ಮಾತ್ರ ಶೇ.100 ಫಲಿತಾಂಶ ಪಡೆದಿತ್ತು.
ಉಳಿದಂತೆ ಅನುದಾನಿ ಪದವಿ ಪೂರ್ವ ಕಾಲೇಜುಗಳಲ್ಲಿ ನಿಟ್ಟೆಯ ಡಾ.ಎನೆಸ್‌ಎಎಂ ಪಿಯು ಕಾಲೇಜು ಮಾತ್ರ ಶೇ.100 ಫಲಿತಾಂಶ ಪಡೆದ ಮಾಹಿತಿ ಈವರೆಗೆ ಬಂದಿದೆ. ಅಲ್ಲದೇ ಜಿಲ್ಲೆಯ 17 ಅನುದಾನ ರಹಿತ ಕಾಲೇಜು ಗಳು ಶೇ.100 ಫಲಿತಾಂಶ ಪಡೆದ ಮಾಹಿತಿ ಈವರೆಗೆ ಲಭಿಸಿದೆ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ.