ಉಡುಪಿ ಜಿಲ್ಲೆಯಲ್ಲಿ 42 ನಾಮಪತ್ರಗಳು ಕ್ರಮಬದ್ಧ

ಉಡುಪಿ, ಎ.21: ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉಡುಪಿ ಜಿಲ್ಲೆಯಿಂದ ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಇಂದು ವಿಧಾನಸಭಾ ಕ್ಷೇತ್ರವಾರು ನಡೆದಿದ್ದು, ಐದು ಕ್ಷೇತ್ರಗಳಲ್ಲಿ ಒಟ್ಟು 42 ನಾಮಪತ್ರಗಳು ಕ್ರಮಬದ್ಧವಾಗಿವೆ. ಕುಂದಾಪುರದಲ್ಲಿ ಒಂದು ಹಾಗೂ ಕಾರ್ಕಳದಲ್ಲಿ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.
ನಿನ್ನೆ ಮುಕ್ತಾಯಗೊಂಡ ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯಗೊಂಡ ಬಳಿಕ ಒಟ್ಟು 88 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ 83 ಪುರುಷರ ಹಾಗೂ ಕೇವಲ ಐದು ಮಹಿಳೆಯರ ನಾಮಪತ್ರಗಳಾಗಿದ್ದವು. ಬೈಂದೂರಿನಲ್ಲಿ 24, ಕುಂದಾಪುರದಲ್ಲಿ 11, ಉಡುಪಿಯಲ್ಲಿ 15 (1ಮಹಿಳೆ), ಕಾಪುವಿನಲ್ಲಿ 15(1) ಹಾಗೂ ಕಾರ್ಕಳದಲ್ಲಿ 23(3) ನಾಮಪತ್ರಗಳು ಸಲ್ಲಿಕೆಯಾಗಿದ್ದವು.
ಪರಿಶೀಲನೆಯ ಬಳಿಕ 42 ಮಂದಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ 38 ಪುರುಷರು ಹಾಗೂ ನಾಲ್ವರು ಮಹಿಳಾ ಸ್ಪರ್ಧಿಗಳಾಗಿದ್ದಾರೆ. ಬೈಂದೂರಿನಲ್ಲಿ 9, ಕುಂದಾಪುರದಲ್ಲಿ 6, ಉಡುಪಿಯಲ್ಲಿ 8(1), ಕಾಪುವಿನಲ್ಲಿ 6(1) ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 9(2) ನಾಮಪತ್ರಗಳು ಉಳಿದುಕೊಂಡಿವೆ.
ಇದೀಗ ಸ್ಪರ್ಧಾಕಣದಲ್ಲಿ ಉಳಿದ ಅಭ್ಯರ್ಥಿಗಳಲ್ಲಿ ಬಿಜೆಪಿ ಪಕ್ಷದ 5, ಕಾಂಗ್ರೆಸ್‌ನ 5, ಆಮ್ ಆದ್ಮಿ ಪಕ್ಷದಿಂದ 5, ಜಾತ್ಯತೀತ ಜನತಾದಳದಿಂದ 5, ಮಾನ್ಯತೆ ಪಡೆದ ಪಕ್ಷಗಳಿಂದ 8 (ಬೈಂದೂರು 2, ಕುಂದಾಪುರ1, ಉಡುಪಿ 3, ಕಾಪು 1, ಕಾರ್ಕಳ1) ಹಾಗೂ ಪಕ್ಷೇತರರು 14 ಮಂದಿ (ಬೈಂದೂರು 3, ಕುಂದಾಪುರ 1, ಉಡುಪಿ 2, ಕಾಪು 2, ಕಾರ್ಕಳ 6) ಸೇರಿದ್ದಾರೆ.
ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಎ.24 ಕೊನೆಯ ದಿನವಾಗಿರುತ್ತದೆ. ಅದೇ ದಿನ ಸಂಜೆಯ ವೇಳೆ ಜಿಲ್ಲೆಯ ಐದು ಕ್ಷೇತ್ರಗಳ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಬಳಿಕ ಚುನಾವಣೆಗೆ ಹಾಗೂ ಪ್ರಚಾರದಲ್ಲಿ ಚುರುಕು ಕಾಣಿಸಿಕೊಳ್ಳಲಿದೆ.







