ನಾಲ್ಕು ಮಂದಿಯ ಗನ್‌ಮ್ಯಾನ್ ಭದ್ರತೆ ವಾಪಸ್: ಮಂಗಳೂರು ಕಮಿಷನರ್ ಕುಲದೀಪ್ ಕುಮಾರ್

ಮಂಗಳೂರು: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ನಾಲ್ವರು ವ್ಯಕ್ತಿಗಳಿಗೆ ನೀಡಲಾಗಿದ್ದ ಗನ್‌ಮ್ಯಾನ್ ಭದ್ರತೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದ್ದಾರೆ.
ಒಟ್ಟು 5 ಮಂದಿಗೆ ಗನ್‌ಮ್ಯಾನ್ ಭದ್ರತೆ ಒದಗಿಸಲಾಗಿತ್ತು. ಅದರಲ್ಲಿ ಓರ್ವರು ಅವರಾಗಿಯೇ ವಾಪಸ್ ಕಳುಹಿಸಿದ್ದಾರೆ. ಇನ್ನುಳಿದ ನಾಲ್ವರಿಗೆ ಇರಬಹುದಾದ ಬೆದರಿಕೆ, ಭದ್ರತೆಯ ಆತಂಕದ ಕುರಿತು ಪರಿಶೀಲನೆ ನಡೆಸಿ ಅನಂತರ ಗನ್‌ಮ್ಯಾನ್‌ನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಯಾವುದೇ ವ್ಯಕ್ತಿಗೆ ಇರುವ ಭದ್ರತಾ ಆತಂಕವನ್ನು ಕಾಲ ಕಾಲಕ್ಕೆ ಪರಿಶೀಲಿಸಿ ಗನ್‌ಮ್ಯಾನ್ ಭದ್ರತೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಇತ್ತೀಚಿನ ಪರಿಶೀಲನೆ ಯನ್ನು ಮಾರ್ಚ್‌ಗೆ ನಡೆಸಲಾಗಿತ್ತು. ಆದಾಗ್ಯೂ ಗನ್‌ಮ್ಯಾನ್ ಭದ್ರತೆ ಅಗತ್ಯವಿದ್ದರೆ ಇಲಾಖೆಗೆ ಹಣ ಪಾವತಿಸಿ ಪಡೆದುಕೊಳ್ಳಲು ಅವಕಾಶವಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಗನ್‌ಮ್ಯಾನ್ ವಾಪಸ್ ಪಡೆದುಕೊಂಡಿರುವ ಬಗ್ಗೆ ಸತ್ಯಜಿತ್ ಸುರತ್ಕಲ್ ಶುಕ್ರವಾರ ಆರೋಪ ಮಾಡಿದ ಬೆನ್ನಿಗೆ ಪೊಲೀಸ್ ಆಯುಕ್ತರಿಂದ ಈ ಹೇಳಿಕೆ ಬಂದಿದೆ.