ಪ್ರಚೋದನಾಕಾರಿ ಹೇಳಿಕೆ: ಶೋಭಾ ಕರಂದ್ಲಾಜೆ, ಪ್ರತಾಪ್‍ಸಿಂಹ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ರಮೇಶ್ ಬಾಬು ಆಗ್ರಹ
ಬೆಂಗಳೂರು, ಎ.21: ಧರ್ಮ, ಜಾತಿ ಹೆಸರಲ್ಲಿ ಕಾಂಗ್ರೆಸ್ ನಾಯಕರನ್ನು ಕ್ರಿಮಿನಲ್‍ಗಳು ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಎಫ್‍ಐಆರ್ ದಾಖಲಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣಾ ಆಯೋಗ ಯಾವುದೇ ಪ್ರಭಾವಕ್ಕೆ ಒಳಗಾಗದೇ ಪಾರದರ್ಶಕವಾಗಿ ಚುನಾವಣೆ ನಡೆಸುವ ವಿಶ್ವಾಸವಿದೆ. ಕೇಂದ್ರ ಚುನಾವಣಾ ಆಯೋಗ ನೀತಿ ಸಂಹಿತೆ ಉಲ್ಲಂಘನೆ ಸಮಯದಲ್ಲಿ ಸ್ವಯಂಕೃತವಾಗಿ ದೂರು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಲು ಸಹ ಅವಕಾಶವಿದ್ದು, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಹೇಳಿಕೆಗಳಿಗೆ ಇದೂವರೆಗೂ ಕ್ರಮ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ಸಚಿವೆ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ರವಿಕುಮಾರ್ ಅವರನ್ನು ಪ್ರಚೋದನೆಗಾಗಿ ಟೂಲ್ ಕಿಟ್ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದೆ. ಇವರು ಜಾತಿ, ಧರ್ಮದ ವಿಚಾರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದರೂ ಕೇಂದ್ರ ಚುನಾವಣಾ ಆಯೋಗ ತಟಸ್ಥವಾಗಿರುವುದೇಕೆ ಎಂದು ರಮೇಶ್‍ಬಾಬು ಪ್ರಶ್ನಿಸಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಶೋಭಾ ಕರಂದ್ಲಾಜೆ ಮಾಡಿರುವ ಗಂಭೀರವಾದ ಪ್ರಚೋದನಾಕಾರಿ ಹೇಳಿಕೆ ಬಗ್ಗೆ ದೂರು ದಾಖಲಿಸುತ್ತೇವೆ. ಅವರು ಧರ್ಮ, ಜಾತಿ ಹೆಸರಲ್ಲಿ ಕಾಂಗ್ರೆಸ್ ನಾಯಕರನ್ನು ಕ್ರಿಮಿನಲ್‍ಗಳು ಎಂಬ ದ್ವೇಷಪೂರಿತ ಸುಳ್ಳು ಆರೋಪ ಮಾಡಿದರೂ ಕೇಂದ್ರ ಚುನಾವಣಾ ಆಯೋಗ ಯಾಕೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಟೂಲ್ ಕಿಟ್ ಭಾಗವಾಗಿ ಈ ಮೂವರು ನಾಯಕರು ರಾಜ್ಯದ ವಿವಿಧ ಕಡೆಗಳಲ್ಲಿ ಮಾತನಾಡುತ್ತಾರೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಬಗ್ಗೆ ಚುನಾವಣೆ ಮಾಡುವುದು ಬೇಡ, ಲವ್ ಜಿಹಾದ್‍ನಂತಹ ಭಾವನಾತ್ಮಕ ವಿಚಾರವಾಗಿ ಚುನಾವಣೆ ಮಾಡೋಣ ಎಂದು ಹೇಳಿದ್ದರು. ಇದೀಗ ಶೋಭಾ ಕರಂದ್ಲಾಜೆ ಹೇಳಿಕೆ ಗಂಭೀರವಾಗಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ತಟಸ್ಥವಾಗಿದೆ. ಅವರಿಗೆ ಕೇಂದ್ರದ ಒತ್ತಡವಿದ್ದರೆ ಅದನ್ನು ಒಪ್ಪಿಕೊಳ್ಳಲಿ ಎಂದು ರಮೇಶ್‍ಬಾಬು ಒತ್ತಾಯಿಸಿದರು.
ಈ ರೀತಿಯ ಪ್ರಚೋದನಾಕಾರಿ ಭಾಷಣ ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಇದಕ್ಕೆ ತಕ್ಕ ಶಿಕ್ಷೆ ಆಗಬೇಕು. ಶೋಭಾ ಕರಂದ್ಲಾಜೆ ಕೆಜೆಪಿ ಕಟ್ಟಿಸಿ ಈಗ ಮತ್ತೆ ಬಿಜೆಪಿಯಲ್ಲಿ ಆಶ್ರಯ ಪಡೆದಿದ್ದಾರೆ. ಅವರು ಯಾರ ಪ್ರಭಾವದಿಂದ ಮಂತ್ರಿಯಾಗಿದ್ದಾರೆ, ಗುಂಪುಗಾರಿಕೆಯಲ್ಲಿ ಯಾರ ಪರವಾಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಬಿಜೆಪಿಗೆ ಅಭಿವೃದ್ಧಿ ಮೇಲೆ ಮಾತನಾಡಲು ಧಮ್ಮು, ತಾಕತ್ತು ಇಲ್ಲ. ಇಂದು ಇಡೀ ದೇಶ 40 ಪರ್ಸೆಂಟ್ ಭ್ರಷ್ಟಾಚಾರದ ಸರಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಆಧಾರ್ ಹಾಗೂ ಪ್ಯಾನ್ ಲಿಂಕ್ ವಿಚಾರವಾಗಿ ಜನ ಸಾಮಾನ್ಯರು ಬೇಸತ್ತಿದ್ದಾರೆ ಎಂದು ರಮೇಶ್‍ಬಾಬು ತಿಳಿಸಿದರು.