ಬೆಂಗಳೂರು ನಗರದ ಹಲವೆಡೆ ಮಳೆ

ಬೆಂಗಳೂರು, ಎ.21: ಬಿರು ಬಿಸಿಲಿನಿಂದ ಬಳಲುತ್ತಿದ್ದ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ರಾತ್ರಿಯವರೆಗೆ ಮಳೆ ಸುರಿದ ಪರಿಣಾಮ ವಾತಾವರಣ ತಂಪೆನಿಸಿತು.
ಕೆಲ ದಿನಗಳಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿಯೇ ಇತ್ತು. ಆದರೆ, ಸಂಜೆ ಏಕಾಏಕಿ ಮೋಡ ಕವಿದು ರಾಜಧಾನಿಯಲ್ಲಿ ಹಲವೆಡೆ ಮಳೆ ಸುರಿಯಲು ಆರಂಭವಾಯಿತು.
ಪ್ರಮುಖವಾಗಿ ಕಾರ್ಪೂರೇಷನ್, ಕೆ.ಆರ್.ಮಾರುಕಟ್ಟೆ, ಮೈಸೂರು ಬ್ಯಾಂಕ್, ರಾಜರಾಜೇಶ್ವರಿನಗರ, ದೀಪಾಂಜಲಿನಗರ, ವಿಜಯನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಕಾಟನ್‍ಪೇಟೆ, ಮಲ್ಲೇಶ್ವರ, ಶೇಷಾದ್ರಿಪುರ, ನಂದಿನಿ ಲೇಔಟ್, ಯಶವಂತಪುರ, ಸದಾಶಿವನಗರ, ಗಿರಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಆಯಿತು.
ಶಿವಾಜಿನಗರ, ಎಂ.ಜಿ.ರಸ್ತೆ, ಅಶೋಕನಗರ, ವಿವೇಕನಗರ, ಕೋರಮಂಗಲ ಹಾಗೂ ಸುತ್ತಮುತ್ತ ಮಳೆ ಇತ್ತು.
ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನ, ಮಳೆಯಲ್ಲೇ ಸಂಚರಿಸಿದರು. ಕೆಲವೆಡೆ ಮಳೆಯಲ್ಲಿ ಜನ ಹೆಜ್ಜೆ ಹಾಕಿದರು. ದ್ವಿಚಕ್ರ ವಾಹನ ಸವಾರರು ರಸ್ತೆ ಬದಿಗಳಲ್ಲಿ ಆಶ್ರಯ ಪಡೆದಿದ್ದರು. ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂತು.
ಶುಕ್ರವಾರ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಮಳೆಯಿಂದ ಸಮಸ್ಯೆಯಾದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.










