ಐಪಿಎಲ್: ಹೈದರಾಬಾದ್ ವಿರುದ್ಧ ಚೆನ್ನೈ ಜಯಭೇರಿ
ಡೆವೊನ್ ಕಾನ್ವೆ ಭರ್ಜರಿ ಅರ್ಧಶತಕ

ಚೆನ್ನೈ, ಎ.21: ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಭರ್ಜರಿ ಅರ್ಧಶತಕದ(ಔಟಾಗದೆ 77 ರನ್, 57 ಎಸೆತ, 12 ಬೌಂಡರಿ, 1 ಸಿಕ್ಸರ್)ಕೊಡುಗೆಯ ನೆರವಿನಿಂದ ಐಪಿಎಲ್‌ನ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ.
ಚೆನ್ನೈ 6ನೇ ಪಂದ್ಯದಲ್ಲಿ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಶುಕ್ರವಾರ ಗೆಲ್ಲಲು 135 ರನ್ ಗುರಿ ಬೆನ್ನಟ್ಟಿದ ಚೆನ್ನೈ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು.
ಋತುರಾಜ್ ಗಾಯಕ್ವಾಡ್(35 ರನ್, 30 ಎಸೆತ)ಹಾಗೂ ಕಾನ್ವೆ ಮೊದಲ ವಿಕೆಟಿಗೆ 87 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ ಅಭಿಷೇಕ್ ಶರ್ಮಾ(34 ರನ್, 26 ಎಸೆತ)ಏಕಾಂಗಿ ಹೋರಾಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.
ರಾಹುಲ್ ತ್ರಿಪಾಠಿ(21 ರನ್), ಹ್ಯಾರಿ ಬ್ರೂಕ್(18 ರನ್), ಮಾರ್ಕೊ ಜಾನ್ಸನ್(ಔಟಾಗದೆ17) ಎರಡಂಕೆಯ ಸ್ಕೋರ್ ಗಳಿಸಿದರು. ಚೆನ್ನೈ ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜ(3-22)ಯಶಸ್ವಿ ಪ್ರದರ್ಶನ ನೀಡಿದರು.