ಜಾತಿ ಗಣತಿ ವಿರುದ್ಧದ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಎ. 21: ಬಿಹಾರದಲ್ಲಿ ಜಾತಿ ಗಣತಿ ನಡೆಸಲು ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಎಪ್ರಿಲ್ 28ರಂದು ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿದೆ.
ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವೊಂದು ವಿಚಾರಣೆಗೆ ಪರಿಗಣಿಸಿತು.
ಜಾತಿ ಗಣತಿಯು ಎಪ್ರಿಲ್ 15ರಂದು ಆರಂಭಗೊಂಡಿದೆ ಮತ್ತು ಮೇ 15ರಂದು ಮುಕ್ತಾಯಗೊಳ್ಳಲಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿಯ ವಿಚಾರಣೆಯನ್ನು ಎಪ್ರಿಲ್ 28ರಂದು ನಡೆಸುವುದಾಗಿ ನ್ಯಾಯಪೀಠ ಹೇಳಿತು.
ಇದಕ್ಕೆ ಮೊದಲೂ, ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ಬಿಹಾರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಆ ಎಲ್ಲಾ ಅರ್ಜಿಗಳನ್ನು ಜನವರಿ 20ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ಅರ್ಜಿಗಳಲ್ಲಿ ಸತ್ವವಿಲ್ಲ ಎಂದು ಹೇಳಿದ ನ್ಯಾಯಾಲಯವು, ಈ ವಿಷಯದಲ್ಲಿ ಅರ್ಜಿದಾರರಿಗೆ ಸಂಬಂಧಿತ ಹೈಕೋರ್ಟ್ಗಳಿಗೆ ಹೋಗುವ ಸ್ವಾತಂತ್ರವಿದೆ ಎಂದು ಹೇಳಿತ್ತು.







