ಸುಡಾನ್ ನಲ್ಲಿರುವ ಭಾರತೀಯರ ತೆರವಿಗೆ ಯೋಜನೆಯನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ

ಹೊಸದಿಲ್ಲಿ,ಎ.21: ರಾಜಧಾನಿ ಖಾರ್ಟೂಮ್ ನಲ್ಲಿರುವ ಸಾವಿರಾರು ಭಾರತೀಯರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿರುವ ಸುಡಾನ್ ಬಿಕ್ಕಟ್ಟಿನ ನಡುವೆಯೇ ಶುಕ್ರವಾರ ಇಲ್ಲಿ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಭಾರತೀಯರನ್ನು ಸುರಕ್ಷಿತವಾಗಿ ತೆರವುಗೊಳಿಸಲು ತುರ್ತು ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಟ್ಟೆಚ್ಚರದಲ್ಲಿರುವಂತೆ, ಬೆಳವಣಿಗೆಗಳ ಮೇಲೆ ನಿಕಟ ನಿಗಾಯಿರಿಸುವಂತೆ ಹಾಗೂ ಸುಡಾನಿನಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ನಿರಂತರವಾಗಿ ವೌಲ್ಯಮಾಪನ ಮಾಡುವಂತೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ನೆರವುಗಳನ್ನು ಒದಗಿಸುವಂತೆಯೂ ಮೋದಿ ಅಧಿಕಾರಿಗಳಿಗೆ ಆದೇಶಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ,ಭಾರತಕ್ಕೆ ಸುಡಾನ್ ರಾಯಭಾರಿ ಬಿ.ಎಸ್.ಮುಬಾರಕ್, ಈಜಿಪ್ಟ್ ಮತ್ತು ರಿಯಾದ್ ಗಳಲ್ಲಿರುವ ಭಾರತದ ರಾಯಭಾರಿಗಳು, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ,ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಕಾನ್ಸುಲರ್,ಪಾಸ್ಪೋರ್ಟ್,ವೀಸಾ ಮತ್ತು ಸಾಗರೋತ್ತರ ಭಾರತೀಯ ವ್ಯವಹಾರಗಳು) ಡಾ.ಔಸಾಫ್ ಸಯೀದ್ ಅವರು ಭಾಗವಹಿಸಿದ್ದ ವರ್ಚುವಲ್ ಸಭೆಯಲ್ಲಿ ಮೋದಿಯವರು ಸುಡಾನಿನಲ್ಲಿರುವ 3,000 ಭಾರತೀಯರ ಸುರಕ್ಷತೆಯ ಮೇಲೆ ನಿರ್ದಿಷ್ಟವಾಗಿ ಗಮನ ಕೇಂದ್ರೀಕರಿಸುವುದರೊಂದಿಗೆ ತಳಮಟ್ಟದ ಸ್ಥಿತಿಯ ಬಗ್ಗೆ ವರದಿಯನ್ನು ಪಡೆದುಕೊಂಡರು.
ಸುಡಾನಿನಲ್ಲಿ ಘರ್ಷಣೆಗಳ ನಡುವೆ ಗುಂಡೇಟಿಗೆ ಬಲಿಯಾದ ಭಾರತೀಯ ಆಲ್ಬರ್ಟ್ ಆಗಸ್ಟಿನ್ (48) ಅವರ ಸಾವಿಗೆ ಪ್ರಧಾನಿ ತನ್ನ ಸಂತಾಪಗಳನ್ನು ವ್ಯಕ್ತಪಡಿಸಿದರು.
ಕ್ಷಿಪ್ರವಾಗಿ ಬದಲಾಗುತ್ತಿರುವ ಸುರಕ್ಷತಾ ಸನ್ನಿವೇಶ ಮತ್ತು ವಿವಿಧ ಆಯ್ಕೆಗಳ ಕಾರ್ಯಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತುರ್ತು ತೆರವು ಯೋಜನೆಗಳನ್ನು ಸಿದ್ಧಪಡಿಸುವಂತೆ ಮೋದಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಹಲವರು ಸುಡಾನಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಕುರಿತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಟ್ವೀಟ್ ಅನ್ನು ಜೈಶಂಕರ್ ಅವರು ಅವಹೇಳನ ಮಾಡುವುದರೊಂದಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಈ ವಿಷಯವು ರಾಜಕೀಯ ತಿರುವನ್ನು ಪಡೆದುಕೊಂಡಿದೆ.
ಗುರುವಾರ ಜೈಶಂಕರ್ ಅವರು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರನ್ನು ಭೇಟಿಯಾಗಿ ಸುಡಾನಿನಲ್ಲಿಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದರು.
ಸುಡಾನಿನಲ್ಲಿ ಸೇನೆ ಮತ್ತು ಅರೆಸೈನಿಕ ಪಡೆಯ ಗುಂಪೊಂದರ ನಡುವೆ ಕಳೆದ ಏಳು ದಿನಗಳಿಂದ ಭೀಕರ ಕಾಳಗ ನಡೆಯುತ್ತಿದ್ದು,ಈವರೆಗೆ ಸುಮಾರು 200 ಜನರು ಮೃತಪಟ್ಟಿದ್ದಾರೆ.







