ಅಣುಬಾಂಬ್ ಪಿತಾಮಹ ಒಪ್ಪೆನ್ ಹೀಮರ್ ಭಾರತಕ್ಕೆ ವಲಸೆ ಬರುವಂತೆ ಕೋರಿದ್ದ ನೆಹರೂ!

ಮುಂಬೈ: ಅಣುಬಾಂಬ್ ಪಿತಾಮಹ ರಾಬರ್ಟ್ ಒಪ್ಪೆನ್‍ಹೀಮರ್ ಅವರನ್ನು ಭಾರತಕ್ಕೆ ವಲಸೆ ಬಂದು ನೆಲೆಸುವಂತೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಕೋರಿದ್ದರು ಎಂಬ ಅಂಶ ಇದೀಗ ಬಹಿರಂಗಗೊಂಡಿದೆ.
ಭಕ್ತಿಯಾರ್ ಕೆ.ದಾದಾಭಾಯಿ ಬರೆದಿರುವ 723 ಪುಟಗಳ ಹೋಮಿ ಭಾಭಾ ಕುರಿತ ಜೀವನಚರಿತ್ರೆಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ಕಾಕತಾಳೀಯ ಎಂಬಂತೆ ಎಪ್ರಿಲ್ 22, ರಾಬರ್ಟ್ ಒಪ್ಪೆನ್‍ಹೀಮರ್ ಅವರ 119ನೇ ಜನ್ಮದಿನವಾಗಿದೆ. ನೆಹರೂ ಅವರ ಕೋರಿಕೆಯನ್ನು ರಾಬರ್ಟ್ ತಳ್ಳಿ ಹಾಕಿದ್ದರು ಎಂದು ಕೃತಿಯಲ್ಲಿ ವಿವರಿಸಲಾಗಿದೆ.
"ಹೋಮಿ ಜೆ. ಭಾಭಾ: ಎ ಲೈಫ್" ಎಂಬ ಕೃತಿಯ ಪ್ರಕಾರ, ಅಮೆರಿಕದ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಮತ್ತು ವಿಜ್ಞಾನಿ 1954ರಲ್ಲಿ ನಿಷ್ಠೆಯ ಕೊರತೆ ಹಿನ್ನೆಲೆಯಲ್ಲಿ ಭದತಾ ಕ್ಲಿಯರೆನ್ಸ್ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಭಾಭಾ ಅವರ ಮಧ್ಯಪ್ರವೇಶದಿಂದಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು, ಭಾರತಕ್ಕೆ ಭೇಟಿ ನೀಡಿ ಇಲ್ಲೇ ನೆಲೆಸುವಂತೆ ರಾಬರ್ಟ್‍ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. "ರಾಬರ್ಟ್ ಇಚ್ಛೆಪಟ್ಟಲ್ಲಿ ಭಾರತಕ್ಕೆ ಬಂದು ಇಲ್ಲೇ ನೆಲೆಸುವಂತೆ ನೆಹರೂ ಕೋರಿದ್ದರು" ಎಂದು ಕೃತಿಯಲ್ಲಿ ವಿವರಿಸಲಾಗಿದೆ.
ಆದರೆ ಎಲ್ಲ ಆರೋಪಗಳಿಂದ ಮುಕ್ತವಾಗುವವರೆಗೆ ಅಮೆರಿಕ ತೊರೆಯುವುದು ಸರಿಯಲ್ಲ ಎಂಬ ಕಾರಣಕ್ಕೆ ಒಪ್ಪೆನ್ ಹೀಮರ್, ಭಾರತದ ಆಹ್ವಾನವನ್ನು ತಳ್ಳಿಹಾಕಿದ್ದರು ಎಂದು ಕೃತಿಯಲ್ಲಿ ಬರೆಯಲಾಗಿದೆ.
ಸೋವಿಯತ್ ಏಜೆಂಟರನ್ನು ಹೆಸರಿಸುವಲ್ಲಿ ವಿಳಂಬ ಮಾಡುವ ಮೂಲಕ ಮತ್ತು ಜಲಜನಕ ಬಾಂಬ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಒಪ್ಪೆನ್‍ಹೀಮರ್ ಹಿಂದೆ ಕಮ್ಯುನಿಸ್ಟರ ಜತೆ ನಂಟು ಹೊಂದಿದ್ದರು ಎಂದು 1953ರ ಡಿಸೆಂಬರ್ 22ರಂದು ಆಪಾದಿಸಲಾಗಿತ್ತು.







