ಯುವ ಕಾಂಗ್ರೆಸ್ ಅಧ್ಯಕ್ಷನ ವಿರುದ್ಧ ಕಿರುಕುಳ ಆರೋಪ ಹೊರಿಸಿದ್ದ ಅಸ್ಸಾಂ ನಾಯಕಿ ಅಂಗ್ಕಿತಾ ದತ್ತಾ ಪಕ್ಷದಿಂದ ಉಚ್ಚಾಟನೆ

ಹೊಸದಿಲ್ಲಿ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ. ವಿ. ಅವರ ವಿರುದ್ಧ ಇತ್ತೀಚೆಗೆ ಕಿರುಕುಳ ಆರೋಪ ಹೊರಿಸಿದ್ದ ಅಸ್ಸಾಂ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಅಂಗ್ಕಿತಾ ದತ್ತಾ ಅವರನ್ನು ʻಪಕ್ಷ ವಿರೋಧಿ ಚಟುವಟಿಕೆಗಳಿಗಾಗಿʼ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ' ಎಂದು ಎಐಸಿಸಿ ಇಂದು ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
ಶ್ರೀನಿವಾಸ್ ಅವರನ್ನು ʻಸೆಕ್ಸಿಸ್ಟ್ʼ ಎಂದು ಬಣ್ಣಿಸಿದ್ದ ಅಂಗ್ಕಿತಾ " ನಾನೊಬ್ಬ ಮಹಿಳಾ ನಾಯಕಿ, ನಾನೇ ಈ ರೀತಿ ಕಿರುಕುಳಕ್ಕೊಳಗಾದರೆ ಇತರ ಮಹಿಳೆಯರಿಗೆ ಪಕ್ಷ ಸೇರಲು ನಾನು ಹೇಗೆ ಪ್ರೋತ್ಸಾಹಿಸಬಹುದು," ಎಂದು ಟ್ವೀಟ್ ಮಾಡಿದ್ದರು.
ಶ್ರೀನಿವಾಸ್ ತಮಗೆ ನಿರಂತರ ಕಿರುಕುಳ ನೀಡಿದ್ದಾರೆ ಹಾಗೂ ಕಳೆದ ಆರು ತಿಂಗಳಿನಿಂದ ತಾವು ಮಹಿಳೆ ಎಂಬ ಕಾರಣಕ್ಕೆ ತಾರತಮ್ಯ ತೋರುತ್ತಿದ್ದಾರೆ ಎಂದು ಸರಣಿ ಟ್ವೀಟ್‌ನಲ್ಲಿ ಆರೋಪಿಸಿದ್ದ ಆಕೆ ಈ ವಿಚಾರವನ್ನು ಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಳಿ ಹಲವಾರು ತಿಂಗಳುಗಳ ಹಿಂದೆ ದೂರಿದ್ದರೂ ಯಾವುದೇ ಕ್ರಮಕೈಗೊಳ್ಳಲಾಗಿರಲಿಲ್ಲ ಎಂದು ದೂರಿದ್ದರು.
ಶ್ರೀನಿವಾಸ್ ತಮ್ಮ ಪ್ರಚಾರ ತಂತ್ರಗಾರಿಕೆಯಿಂದ ಎಲ್ಲಾ ತಪ್ಪುಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ನಾನು ಹಲವಾರು ತಿಂಗಳ ಕಾಲ ಕ್ರಮಕ್ಕೆ ಕಾದು ಕುಳಿತಿದ್ದೆ ಎಂದೂ ಆಕೆ ಹೇಳಿದ್ದರು.
ಆಕೆಯ ಆರೋಪಗಳ ಹಿನ್ನೆಲೆಯಲ್ಲಿ ಶ್ರೀನಿವಾಸ್ ಆಕೆಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದರಲ್ಲದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೇ ಇದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.
ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅಸ್ಸಾಂನ ಮಾಜಿ ಸಚಿವ ಅಂಜನ್ ದತ್ತಾ ಅವರ ಪುತ್ರಿಯಾಗಿದ್ದಾರೆ ಅಂಗ್ಕಿತಾ. ಆಕೆ ವಿಧಾನಸಭಾ ಚುನಾವಣೆಯನ್ನು ಅಮ್ಗುರಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು.







