ಐಐಟಿ-ಮದ್ರಾಸ್‌ನಲ್ಲಿ ಇನ್ನೋರ್ವ ವಿದ್ಯಾರ್ಥಿ ಆತ್ಮಹತ್ಯೆ: ಈ ವರ್ಷದಲ್ಲಿ ನಾಲ್ಕನೇ ಪ್ರಕರಣ

ಹೊಸದಿಲ್ಲಿ: ಐಐಟಿ-ಮದ್ರಾಸ್‌ನ ಎರಡನೇ ವರ್ಷದ ಬಿಟೆಕ್ ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಶುಕ್ರವಾರ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದ್ದು ಈ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಈ ವರ್ಷ ವರದಿಯಾದ ನಾಲ್ಕನೇ ಇಂತಹ ಪ್ರಕರಣ ಇದಾಗಿದೆ.
ಮಧ್ಯಪ್ರದೇಶ ಮೂಲದ ಸುರೇಶ್ ಎಂಬ ಹೆಸರಿನ 20 ವರ್ಷದ ವಿದ್ಯಾರ್ಥಿ ಕ್ಯಾಂಪಸ್ ಒಳಗಡೆ ಇರುವ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ಶುಕ್ರವಾರ ಬೆಳಿಗ್ಗೆ ಆತನ ಕೊಠಡಿ ಹಲವು ಗಂಟೆಗಳ ಕಾಲ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ ಆತನ ಸ್ನೇಹಿತರು ಆತನಿಗೆ ಕರೆ ಮಾಡಿದ್ದರೂ ಉತ್ತರವಿಲ್ಲದೇ ಇದ್ದಾಗ ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಗೆ ಕ್ರಮಕೈಗೊಂಡಿದ್ದಾರೆ.
ಮದ್ರಾಸ್ ಐಐಟಿಯಲ್ಲಿ ತೀರಾ ಇತ್ತೀಚೆಗೆ, ಮಾರ್ಚ್ 31 ರಂದು ಸಂಶೋಧನಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೈದಿದ್ದ. ಈ ಘಟನೆಯಲ್ಲಿ ಪ್ರೊಫೆಸರ್ ಒಬ್ಬರ ಶಾಮೀಲಾತಿ ಶಂಕಿಸಿ ಅವರಿಗೆ ವಿಭಾಗದ ಪ್ರಯೋಗಾಲಯಕ್ಕೆ ಐಐಟಿ ಆಡಳಿತ ಪ್ರವೇಶ ನಿರ್ಬಂಧಿಸಿತ್ತು. ಸಂಶೋಧನಾ ವಿದ್ಯಾರ್ಥಿಯ ಸಹೋದರ ಐಐಟಿ-ಮದ್ರಾಸ್ ನಿರ್ದೇಶಕರಿಗೆ ಪತ್ರ ಬರೆದು ತನ್ನ ಸಹೋದರನ ಮೇಲೆ ಅತಿಯಾದ ಒತ್ತಡವಿತ್ತು ಹಾಗೂ ಆತನಿಗೆ ಆಗಾಗ ಬೈಯ್ಯಲಾಗುತ್ತಿದ್ದುದರಿಂದ ಆತ ಒತ್ತಡಕ್ಕೊಳಗಾಗಿ ಮಾನಸಿಕ ಆರೋಗ್ಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪತ್ರದಲ್ಲಿ ವಿವರಿಸಲಾಗಿತ್ತು.
ಈ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಇನ್ನೂ ಎರಡು ಆತ್ಮಹತ್ಯೆ ಪ್ರಕರಣಗಳು ನಡೆದಿದ್ದರೆ ಕಳೆದ ವರ್ಷದ ಸೆಪ್ಟೆಂಬರ್ ಗಿಂಗಳಿನಲ್ಲಿ 21 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೈದಿದ್ದ.







