ಕೇರಳ ಭೇಟಿ ವೇಳೆ ಪ್ರಧಾನಿ ಮೇಲೆ ದಾಳಿ ಬೆದರಿಕೆ ಇರುವ ಪತ್ರ ಬಿಜೆಪಿ ಕಚೇರಿಗೆ ಬಂದಿದೆ: ಕೆ. ಸುರೇಂದ್ರನ್
ತಿರುವನಂತಪುರ: ಸೋಮವಾರದಿಂದ ಆರಂಭಗೊಂಡು ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ನೀಡುವ ಎರಡು ದಿನಗಳ ಭೇಟಿ ಸಂದರ್ಭ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸುವ ಕುರಿತಂತೆ ಬೆದರಿಕೆ ಪತ್ರ ತಮಗೆ ಬಂದಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿಕೊಂಡಿದ್ದಾರೆ.
ಪ್ರಧಾನಿ ತಮ್ಮ ಕೇರಳ ಭೇಟಿ ವೇಳೆ ರಾಜ್ಯದ ಪ್ರಥಮ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಕೊಚ್ಚಿ ವಾಟರ್ ಮೆಟ್ರೋ ಉದ್ಘಾಟಿಸಲಿದ್ದಾರೆ.
ತಮಗೆ ಬಂದ ಬೆದರಿಕೆ ಪತ್ರವನ್ನು ಮಲಯಾಳಂ ಭಾಷೆಯಲ್ಲಿ ಕೊಚ್ಚಿಯ ವ್ಯಕ್ತಿಯೊಬ್ಬ ಬರೆದಿದ್ದಾನೆಂದು ತಿಳಿದು ಬಂದಿದೆ. ಒಂದು ವಾರದ ಹಿಂದೆ ಪಕ್ಷದ ಪ್ರಾದೇಶಿಕ ಕಚೇರಿಗೆ ಈ ಪತ್ರ ಬಂದಿದ್ದು ಅದನ್ನು ರಾಜ್ಯ ಡಿಜಿಪಿಗೆ ಸಲ್ಲಿಸಲಾಗಿದೆ ಎಂದು ಸುರೇಂದ್ರನ್ ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗಾದ ಗತಿಯೇ ಮೋದಿಗೆ ಆಗಲಿದೆ ಎಂದು ಈ ಪತ್ರದಲ್ಲಿ ಬರೆಯಲಾಗಿದೆ ಎನ್ನಲಾಗಿದ್ದು ಪೊಲೀಸರು ಎನ್. ಕೆ. ಜಾನ್ನಿ ಎಂಬ ಕೊಚ್ಚಿಯ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಆತ ತಾನು ಈ ಪತ್ರ ಬರೆದಿಲ್ಲ ಎಂದು ಹೇಳಿದ್ದಾನಲ್ಲದೆ ತನ್ನ ಮೇಲೆ ದ್ವೇಷ ಇರುವ ಯಾರೋ ಇದನ್ನು ಮಾಡಿರಬಹುದು ಎಂದಿದ್ದಾನೆ.
ಪೊಲೀಸರು ತನ್ನ ಮನೆಗೆ ಬಂದು ಪರಿಶೀಲನೆ ನಡೆಸಿ ತನ್ನ ಕೈಬರಹವನ್ನು ಅವಲೋಕಿಸಿದ್ದಾರೆ ಹಾಗೂ ನನ್ನ ಕೈಬರಹವು ಪತ್ತದಲ್ಲಿನ ಕೈಬರಹಕ್ಕಿಂತ ಭಿನ್ನವಾಗಿದೆ ಎಂದು ಕಂಡುಕೊಂಡಿದ್ದಾರೆ ಎಂದು ಆತ ಹೇಳಿದ್ದಾನೆ.