ಸಿಎಂ ಹುದ್ದೆ ಮೇಲೆ ಅಜಿತ್ ಪವಾರ್ ಕಣ್ಣು: ಸಂಜಯ್ ರಾವುತ್ ಪ್ರತಿಕ್ರಿಯಿಸಿದ್ದು ಹೀಗೆ…

ಮುಂಬೈ: ಮುಂದಿನ ವರ್ಷ ನಡೆಯುವ ಚುನಾವಣೆಗಳಿಗೆ ಕಾಯದೆ ಈಗಲೇ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಸ್ಥಾಪಿಸಲು ತಾನು ಸಿದ್ಧ ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಉದ್ಧವ್ ಠಾಕೆ ನೇತೃತ್ವದ ಶಿವಸೇನೆ ನಾಯಕ ಸಂಜಯ್ ರಾವುತ್, ಈಗಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಗಂಟುಮೂಟೆ ಕಟ್ಟಿ ತೆರಳಲು ಬಿಜೆಪಿ ಹೇಳಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದರು.
"ಅಜಿತ್ ಪವಾರ್ ಹೇಳಿರುವುದರ ಹಿಂದೆ ಏಕನಾಥ್ ಶಿಂಧೆ ಮತ್ತವರ ಬಣಕ್ಕೆ ಸ್ಪಷ್ಟ ಸಂದೇಶವಿದೆ. ಅವರಿಗೆ ಗಂಟುಮೂಟೆ ಕಟ್ಟಲು ಬಿಜೆಪಿ ಹೇಳಿದೆ. ಇದೇ ಕಾರಣದಿಂದ ಶಿಂಧೆ ಈಗ ಮೌನಕ್ಕೆ ಜಾರಿದ್ದಾರೆ" ಎಂದು ಉದ್ಧವ್ ಬಣದ ಶಿವಸೇನೆ ವಕ್ತಾರರಾಗಿರುವ ಸಂಜಯ್ ರಾವುತ್ ಹೇಳಿದ್ದಾರೆ.
ಶುಕ್ರವಾರ ಸಕಾಲ್ ಗ್ರೂಪ್ ಸಂದರ್ಶನದ ವೇಳೆ ಮಾತನಾಡಿದ ಅಜಿತ್ ಪವಾರ್, "2024 ಮಾತ್ರ ಅಲ್ಲ, ಈಗಲೂ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಸ್ಥಾಪಿಸಲು ನಾನು ಸಿದ್ಧ" ಎಂದಿದ್ದರು.
"ಅಜಿತ್ ಪವಾರ್ ಅವರು ಸಿಎಂ ಹುದ್ದೆಗೆ ಬೇಡಿಕೆಯಿರಿಸಿದರೆ ನಮ್ಮ ಪಕ್ಷ ಅವರಿಗೆ ಒಳ್ಳೆಯದನ್ನು ಬಯಸುತ್ತದೆ. ಏನೋ ಇದೆ, ಅಜಿತ್ ಪವಾರ್ ಚಿಂತಿತರಾಗಿದ್ದಾರೆ. ಅವರ ವಿರುದ್ಧದ ಪ್ರಕರಣಗಳನ್ನು ಮುಂದುವರಿಸುವ ಕುರಿತು ಬಿಜೆಪಿ ಅವರ ಮೇಲೆ ಒತ್ತಡ ಹೇರುತ್ತಿರುವಂತೆ ಕಾಣುತ್ತದೆ" ಎಂದು ರಾವುತ್ ಹೇಳಿದ್ದಾರೆ.
ಬಿಜೆಪಿ ಹೇರುತ್ತಿರುವ ಒತ್ತಡ ಬಗ್ಗೆ ಅಜಿತ್ ಪವಾರ್ ಅವರು ಶರದ್ ಪವಾರ್ ಬಳಿ ಹೇಳಿಕೊಂಡಿದ್ದಾರೆಂದು ರಾವುತ್ ಈ ಹಿಂದೆ ಹೇಳಿದ್ದರು.
ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆಯಿದೆ ಎಂಬ ಊಹಾಪೋಹಗಳಿಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಅಜಿತ್ ಪವಾರ್ ತಾವು ಕೊನೆಯ ಉಸಿರಿರುವ ತನಕ ಎನ್‌ಸಿಪಿ ತೊರೆಯುವುದಿಲ್ಲ ಎಂದಿದ್ದರು. ಆದರೆ ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಗೆ ಅವರು ಉತ್ತರಿಸಿಲ್ಲ.







