ಪಶ್ಚಿಮ ಬಂಗಾಳ: ತರುಣಿಯ ಅತ್ಯಾಚಾರ,ಕೊಲೆ ಶಂಕೆ, ಮತ್ತೆ ಹಿಂಸಾಚಾರ

ಕೋಲ್ಕತ್ತಾ: ಶುಕ್ರವಾರ ಬೆಳಗ್ಗೆ ಶವವಾಗಿ ಪತ್ತೆಯಾದ ತರುಣಿಯ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಶಂಕೆಯಲ್ಲಿ ಆಕ್ರೋಶ ವ್ಯಕ್ತವಾಗಿರುವ ನಡುವೆ ಪಶ್ಚಿಮ ಬಂಗಾಳದ ಕಲಿಯಗಂಜ್‌ನಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿರುವ ಕುರಿತು ವರದಿಯಾಗಿದೆ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಬಲಪ್ರಯೋಗ ಮಾಡಿ ಮತ್ತೆ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಬೇಕಾಯಿತು ಹಾಗೂ ಶಾಂತತೆಯನ್ನು ಕಾಪಾಡಲು ಹೆಚ್ಚಿನ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಬಲೂರ್‌ಘಾಟ್ ಸಂಸದ ಸುಕಾಂತ ಮಜುಂದಾರ್ ಇಂದು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲು ಪೊಲೀಸರು ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಏತನ್ಮಧ್ಯೆ, ಈ ಘಟನೆಯನ್ನು ಬಿಜೆಪಿಯು ತೃಣಮೂಲ ಕಾಂಗ್ರೆಸ್ ನೇತೃತ್ವದ ಸರಕಾರದ ಮೇಲೆ ದಾಳಿ ಮಾಡಲು ಬಳಸುತ್ತಿದೆ.
ಶುಕ್ರವಾರ ಬೆಳಗ್ಗೆ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಗಂಜ್ ಪಟ್ಟಣದ ಕೊಳದ ದಡದಲ್ಲಿ ತರುಣಿಯ ಶವ ಪತ್ತೆಯಾದಾಗ ಈ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದ ತರುಣಿಯ ಶವವನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.





