ಎರಡು ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಪಾದಚಾರಿಗಳ ಬಲಿ

ಕೋಟ, ಎ.22:ಡಿವೈಡರ್ ಬಳಿ ರಸ್ತೆ ದಾಟಲು ನಿಂತಿದ್ದ ಪಾದಾಚಾರಿ ಯೊಬ್ಬರು ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಚಿತ್ರಪಾಡಿ ಪರಿವರ್ತನಾ ಆಸ್ಪತ್ರೆ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಇಂದು ಬೆಳಗ್ಗೆ 9:50ರ ಸುಮಾರಿಗೆ ನಡೆದಿದೆ.
ಮೃತರನ್ನು ಚಿತ್ರಪಾಡಿಯ ರಘುರಾಮ ಶೆಟ್ಟಿ (75) ಎಂದು ಗುರುತಿಸಲಾಗಿದೆ.
ಕಾರ್ಯನಿಮಿತ್ತ ಕೋಟಕ್ಕೆ ಬಂದಿದ್ದ ಅವರು ಮನೆಗೆ ಮರಳಲು ಪಶ್ಚಿಮ ಬದಿಯಿಂದ ಪೂರ್ವದ ಡಿವೈಡರ್ ಬಳಿ ನಡೆದುಕೊಂಡು ಹೋಗುತಿದ್ದಾಗ ವೇಗವಾಗಿ ಕುಂದಾಪುರದತ್ತ ಸಾಗುತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಪಾದಾಚಾರಿಗೆ ಬಡಿದು ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮೇಲೆ ಹತ್ತಿ ಮತ್ತೊಂದು ಬದಿಯಲ್ಲಿ ನಿಂತಿತ್ತು.
ಪರಿಣಾಮವಾಗಿ ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರವಾದ ಗಾಯವಾದ ರಘುರಾಮ ಶೆಟ್ಟಿ ಅವರು ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ರಾತ್ರಿ 11:15ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ-66ನ್ನು ದಾಟಲು ನಿಂತಿದ್ದ ಪಾದಾಚಾರಿಯೊಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಅವರು ಮೃತಪಟ್ಟ ಘಟನೆ ವರದಿಯಾಗಿದೆ.
ಪಾದಾಚಾರಿ ನಾಗೇಶ್ ಪೂಜಾರಿ ಎಂಬವರು ರಸ್ತೆ ದಾಟಲು ನಿಂತಿದ್ದಾಗ ತ್ರಾಸಿ ಕಡೆಯಿಂದ ಕುಂದಾಪುರದತ್ತ ಹೋಗುತಿದ್ದ ಕಾರು ರಸ್ತೆಯ ತೀರಾ ಬಲಬದಿಗೆ ಬಂದು ನಾಗೇಶ್ ಪೂಜಾರಿ ಅವರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಬಿದ್ದು ಹಣೆ, ಮುಖಕ್ಕೆ ಗಾಯ, ಎಡಕಾಲಿನ ಮೂಳೆಮುರಿತಕ್ಕೊಳಗಾದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೂ ರಾತ್ರಿ 11:45ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







