'ಲಿಂಗಾಯತ ಸಿಎಂ' ಪ್ರಸ್ತಾವ ತಿರಸ್ಕರಿಸಿದ ಅಮಿತ್ ಶಾ

ಬೆಂಗಳೂರು: ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಯತ್ನದಲ್ಲಿರುವ ಕಾಂಗ್ರೆಸ್ ಕಾರ್ಯತಂತ್ರಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಲಿಂಗಾಯತ ಮುಖಂಡರೊಬ್ಬರನ್ನು ಬಿಂಬಿಸುವ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರೋಧಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಪ್ರಮುಖ ಲಿಂಗಾಯಿತ ಮುಖಂಡರಾದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಪಕ್ಷ ತೊರೆದಿರುವುದರಿಂದ 224 ಸದಸ್ಯಬಲದ ವಿಧಾನಸಭೆಯಲ್ಲಿ ಅಗತ್ಯ ಬಹುಮತ (113 ಸ್ಥಾನ)ಕ್ಕಿಂತ 15-20 ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಕ್ಷದ ಕಾರ್ಯಯೋಜನೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಶಾ ಶನಿವಾರ ಸ್ಪಷ್ಟಪಡಿಸಿದ್ದಾರೆ.
"ಲಿಂಗಾಯತ ಮುಖಂಡರ ನಿರ್ಗಮನದಿಂದ ಪಕ್ಷಕ್ಕೆ ಆಗಬಹುದಾದ ಹಾನಿಯನ್ನು ತಡೆಯಲು ಲಿಂಗಾಯತ ಮುಖಂಡರೊಬ್ಬರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವಂತೆ ಪ್ರಸ್ತಾವ ಮುಂದಿಟ್ಟೆವು. ಆದರೆ ಇದು ಲಿಂಗಾಯತರನ್ನು ಹೊರತುಪಡಿಸಿ ಇತರ ಮತದಾರರ ಧ್ರುವೀಕರಣಕ್ಕೆ ಕಾರಣವಾಗುತ್ತದೆ ಎಂಬ ಕಾರಣ ನೀಡಿ ಶಾ ಇದನ್ನು ತಿರಸ್ಕರಿಸಿದರು" ಎಂದು ಶಾ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.
ಡಬಲ್ ಎಂಜಿನ್ ಪ್ರಗತಿ ಮತ್ತು ಮೀಸಲಾತಿ ವಿಷಯವನ್ನು ಚುನಾವಣೆಯಲ್ಲಿ ಬಿಂಬಿಸುವಂತೆ ಶಾ ರಾಜ್ಯ ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಎಪ್ರಿಲ್ 30ರ ಬಳಿಕ ಪ್ರಧಾನಿ ನರೇಂದ್ರ ಮೋದಿ ನಡೆಸುವ 20ಕ್ಕೂ ಹೆಚ್ಚು ರ‍್ಯಾಲಿಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆಯೂ ಸಲಹೆ ನೀಡಿದರು.







