ಐಪಿಎಲ್: ಒಂದೇ ಓವರ್ ನಲ್ಲಿ 31 ರನ್ ನೀಡಿ ಮುಂಬೈ ಇಂಡಿಯನ್ಸ್ ನ 2ನೇ ದುಬಾರಿ ಬೌಲರ್ ಆದ ಅರ್ಜುನ್ ತೆಂಡುಲ್ಕರ್

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ಯುವ ಆಟಗಾರ ಅರ್ಜುನ್ ತೆಂಡುಲ್ಕರ್ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ತವರಿನ ಪ್ರೇಕ್ಷಕರ ಮುಂದೆ ತಮ್ಮ ಮೊದಲ ವಿಕೆಟ್ ಪಡೆದರು, ಆದಾಗ್ಯೂ, ಅವರು 16ನೇ ಓವರ್‌ನಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟರು . ಆ ಮೂಲಕ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನ ಎರಡನೇ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು.
ಡೇನಿಯಲ್ ಸ್ಯಾಮ್ಸ್ ಅವರು 2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 35 ರನ್ ಬಿಟ್ಟುಕೊಟ್ಟಿದ್ದರಿಂದ ಅವರು ಮುಂಬೈನ ಮೊದಲ ಅತ್ಯಂತ ದುಬಾರಿ ಬೌಲರ್ ಆಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (2014) ವಿರುದ್ಧ ಪವನ್ ಸುಯಲ್, ರಾಜಸ್ಥಾನ ರಾಯಲ್ಸ್ ವಿರುದ್ಧ (2019) ಅಲ್ಜಾರಿ ಜೋಸೆಫ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ( 2017ರಲ್ಲಿ ) ಮಿಚೆಲ್ ಮೆಕ್‌ಕ್ಲೆನಾಘನ್ ತಲಾ 28 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಬೌಲರ್ ಪಟ್ಟಿಯಲ್ಲಿ 3ನೇ ಸ್ಥಾನ ಹಂಚಿಕೊಂಡಿದ್ದಾರೆ..
ಅರ್ಜುನ್ ಅವರ ಓವರ್ ಶನಿವಾರದ ಪಂದ್ಯದಲ್ಲಿ ನಿರ್ಣಾಯಕವಾಗಿದ್ದು, ಇದು ಪಂದ್ಯವು ಪಂಜಾಬ್ ಕಿಂಗ್ಸ್ ನತ್ತ ವಾಲಲು ಕಾರಣವಾಯಿತು.
ಇನಿಂಗ್ಸ್‌ನ ಆರಂಭದಲ್ಲಿಯೇ ಮ್ಯಾಥ್ಯೂ ಶಾರ್ಟ್ (11) ವಿಕೆಟ್ ಕಳೆದುಕೊಂಡರೂ ಪಂಜಾಬ್ ತಂಡ ಯುವ ಆಟಗಾರರಾದ ಪ್ರಭಾಸಿಮ್ರಾನ್ ಸಿಂಗ್ ಹಾಗೂ ಅಥರ್ವ ಟೈಡೆ ನೆರವನಿಂದ 5.3 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿತು.
ಪ್ರಭಾಸಿಮ್ರಾನ್ ಸಿಂಗ್ (25) ವಿಕೆಟನ್ನು ಪಡೆದ ಅರ್ಜುನ್ ತೆಂಡುಲ್ಕರ್ ತವರು ಪ್ರೇಕ್ಷಕರ ಮುಂದೆ ತಮ್ಮ ಮೊದಲ ವಿಕೆಟ್ ಪಡೆದರು
ಪಂಜಾಬ್ ನಿಧಾನವಾಗಿ 13.4 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟುತ್ತಿದ್ದಂತೆ ಸ್ಯಾಮ್ ಕರನ್ ಮತ್ತು ಹರ್‌ಪ್ರೀತ್ ಪ್ರತಿ ದಾಳಿ ಆರಂಭಿಸಿದರು.
ಕರನ್ ಹಾಗೂ ಹರ್‌ಪ್ರೀತ್ 16ನೇ ಓವರ್‌ನಲ್ಲಿ ಯುವ ಆಟಗಾರ ಅರ್ಜುನ್ ತೆಂಡುಲ್ಕರ್ ಅವರನ್ನು ಗುರಿಯಾಗಿ ತೆಗೆದುಕೊಂಡರು. ಅರ್ಜುನ್ ತಮ್ಮ ಓವರ್‌ನಲ್ಲಿ ಆರು ಬೌಂಡರಿಗಳ ಸಹಿತ ಒಟ್ಟು 31 ರನ್‌ಗಳನ್ನು ಬಿಟ್ಟುಕೊಟ್ಟರು, ಈ ಓವರ್ ಇಡೀ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು.
ತೆಂಡುಲ್ಕರ್ 3 ಓವರ್ ಗಳಲ್ಲಿ 1 ವಿಕೆಟ್ ಪಡೆದು ಒಟ್ಟು 48 ರನ್ ಬಿಟ್ಟುಕೊಟ್ಟರು.
ಪಂಜಾಬ್ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಗೆಲ್ಲಲು 215 ರನ್ ಗುರಿ ಪಡೆದ ಮುಂಬೈ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ 13 ರನ್ ನಿಂದ ಸೋಲುಂಡಿತು. ಅರ್ಷದೀಪ್ ಸಿಂಗ್(4-29) ಯಶಸ್ವಿ ಪ್ರದರ್ಶನ ನೀಡಿದರು. ಕ್ಯಾಮರೂನ್ ಗ್ರೀನ್ (67 ರನ್) ಹಾಗೂ ಸೂರ್ಯಕುಮಾರ ಯಾದವ್(57 ರನ್, 26 ಎಸೆತ)ಅರ್ಧಶತಕ ವ್ಯರ್ಥವಾಯಿತು.







