ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಕಿರುಕುಳ, ಬೆದರಿಕೆ ಆರೋಪ: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ವಿರುದ್ಧ ದೂರು

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರನ್ನು ಠಾಣೆಗೆ ಕರೆಸಿ ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ವಿರುದ್ಧ ಕೆಪಿಸಿಸಿ ಕಾನೂನು ಮಾನವ ಹಕ್ಕುಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಸಂಜಯ್ ಯಾದವ್ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಡಿಸಿಪಿ ಲಕ್ಷ್ಮಣ್ ನಿಂಬರ್ಗಿಯವರನ್ನ ವರ್ಗಾವಣೆ ಮಾಡುವಂತೆ ಒತ್ತಾಯಿಸಿರುವ ಸಂಜಯ್ ಯಾದವ್, ಗೋವಿಂದರಾಜನಗರ ಮಾಜಿ ಸಚಿವರ ಕೃಪಾಕಟಾಕ್ಷದಿಂದ ಅಧಿಕಾರ ಪಡೆದುಕೊಂಡಿರುವ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ, ಅವರ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಹೋಗದಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, 'ಕಾಂಗ್ರೆಸ್ ಕಾರ್ಯಕರ್ತರನ್ನು ಠಾಣೆಗೆ ಕರೆಸಿ ನೀವು ಪ್ರಚಾರ ಮಾಡಿದರೆ ನಿಮಗೆ ಎಫ್.ಐ.ಆರ್ ದಾಖಲಿಸುತ್ತೇನೆ, ರೌಡಿಗಳ ಪಟ್ಟಿಯಲ್ಲಿ ರೌಡಿ ಶೀಟರ್ ಎಂದು ನಮೂದಿಸುತ್ತೇನೆ, ಕ್ರಿಮಿನಲ್ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಒಡ್ಡುತ್ತಾರೆ' ಎಂದು ದೂರಿನಲ್ಲಿ ಸಂಜಯ್ ಯಾದವ್ ತಿಳಿಸಿದ್ದಾರೆ.