ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸರಕಾರದ ಆಡಳಿತ ಅಂತ್ಯಗೊಳ್ಳಲಿದೆ: ರೋಜಿ ಎಂ. ಜಾನ್

ಮಂಗಳೂರು, ಎ.23: ಕರ್ನಾಟಕ ರಾಜ್ಯದಲ್ಲಿ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ '40 ಪರ್ಸೆಂಟ್ ಕಮೀಷನ್ ಸರಕಾರ'ದ ಆಡಳಿತ ಅಂತ್ಯಗೊಳ್ಳಲಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ಮತ್ತು ಬಿಜೆಪಿ ವಿರುದ್ಧವಾದ ಅಲೆ ಇದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ. ಜೋನ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ PAYCM ಯುಗ ಅಂತ್ಯಗೊಳ್ಳಲಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಕರಾವಳಿಯಲ್ಲಿಯೂ ಈ ಬಾರಿ ಎಲ್ಲಾ ಕಡೆ ಕಾಂಗ್ರೆಸ್ ಜಯ ಗಳಿಸುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ನಲ್ಲಿ ಟಿಕೆಟ್ ಮಾರಾಟ ಮಾಡಲಾಗಿದೆ ಎಂಬ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮೊಯ್ದಿನ್ ಬಾವ ಎಂಬ ಆರೋಪದ ಬಗ್ಗೆ ಸುದ್ದಿಗಾರರು ಗಮನಸೆಳೆದಾಗ ಪ್ರತಿಕ್ರಿಯಿಸಿದ ರೋಜಿ ಜಾನ್, ಕಾಂಗ್ರೆಸ್ ಟಿಕೆಟ್ ಈ ಬಾರಿ ಸಿಗದೆ ಇದ್ದ ಕಾರಣ ಹತಾಶರಾಗಿ ಅವರು ಆ ರೀತಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಆರೋಪ ಗಳ ಬಗ್ಗೆ ಆಧಾರಗಳಿದ್ದರೆ ಬಹಿರಂಗ ಪಡಿಸಲಿ. ಅದೇರೀತಿ ಕಾಂಗ್ರೆಸ್ ಈ ಹಿಂದೆ ಅವರಿಗೆ ಮೂರು ಬಾರಿ ಟಿಕೆಟ್ ನೀಡಿದಾಗ ಅವರು ಹೇಗೆ ಟಿಕೆಟ್ ಪಡೆದಿದ್ದರು ಎನ್ನುವುದನ್ನು ಮೊಯ್ದಿನ್ ಬಾವ ಬಹಿರಂಗಪಡಿಸಲಿ ಎಂದರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರ ಪರವಾದ ವಾತಾವರಣವಿದೆ. ನಂದ ಕುಮಾರ್ ಅವರ ಜೊತೆ ಮಾತನಾಡಿ ಮನವರಿಕೆ ಮಾಡಲಾಗಿದೆ. ಎ.25ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.







