ಕರ್ನಾಟಕ ಚುನಾವಣೆ: 215 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲಿರುವ ಸಿಪಿಐ

ಬೆಂಗಳೂರು: ಕಾಂಗ್ರೆಸ್ (Congress) ಪಕ್ಷವು ಭಾರತೀಯ ಕಮ್ಯುನಿಸ್ಟ್ ಪಕ್ಷದ (CPI) ಬೆಂಬಲ ಕೋರಿದ್ದು, ಯಾವುದೇ ಪೂರ್ವ ಶರತ್ತಿಲ್ಲದೆ ಆ ಪಕ್ಷದ ಕಾರ್ಯಕರ್ತರೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ರವಿವಾರ ಕಾಂಗ್ರೆಸ್ ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ ಪ್ರಕಟಿಸಿದ ನಂತರ ಕಾಂಗ್ರೆಸ್ ಪಕ್ಷದಿಂದ ಈ ಹೇಳಿಕೆ ಹೊರಬಿದ್ದಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಣದೀಪ್ ಸುರ್ಜೇವಾಲಾ, "ನಾವು ಭಾರತೀಯ ಕಮ್ಯೂನಿಸ್ಟ್ ಪಕ್ಷದ ನೆರವು ಕೋರಿದ್ದೇವೆ. ಅವರು ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇನ್ನೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸುವವರಿದ್ದರು. ಆದರೆ, ಅವರು ಏಳು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಬಿಜೆಪಿ ವಿರುದ್ಧದ ಈ ಹೋರಾಟದಲ್ಲಿ ಯಾವುದೇ ಪೂರ್ವ ಶರತ್ತು ಅಥವಾ ಅಪೇಕ್ಷೆಯಿಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಅವರ ಪಕ್ಷದ ಕಾರ್ಯಕರ್ತರೆಲ್ಲರೂ ತುಂಬಿದ ಹೃದಯದ ಬೆಂಬಲ ನೀಡಲಿದ್ದಾರೆ" ಎಂದು ಹೇಳಿದ್ದಾರೆ.







