ದ್ವೇಷಭಾಷಣ, ಕೋಮು ಹಿಂಸಾಚಾರ ಸೇರಿದಂತೆ 385 ಪ್ರಕರಣಗಳನ್ನು ಕೈಬಿಟ್ಟ ರಾಜ್ಯದ ಬಿಜೆಪಿ ಸರಕಾರ: ವರದಿ

ಬೆಂಗಳೂರು: ರಾಜ್ಯದ ಬಿಜೆಪಿ ಸರಕಾರವು ಜುಲೈ 2019 ಮತ್ತು ಎಪ್ರಿಲ್ 2023ರ ನಡುವಿನ ನಾಲ್ಕು ವರ್ಷಗಳ ತನ್ನ ಅಧಿಕಾರಾವಧಿಯಲ್ಲಿ ದ್ವೇಷ ಭಾಷಣ, ತಥಾಕಥಿತ ಗೋರಕ್ಷಕರ ದಾಳಿ ಮತ್ತು ಕೋಮು ಹಿಂಸಾಚಾರದ 182 ಪ್ರಕರಣಗಳು ಸೇರಿದಂತೆ 385 ಕ್ರಿಮಿನಲ್ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಕೈಬಿಡಲು ಏಳು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. ರಾಜ್ಯ ಗೃಹ ಇಲಾಖೆಯು ಇತ್ತೀಚಿಗೆ ಆರ್ಟಿಐ ಅರ್ಜಿಯೊಂದಕ್ಕೆ ನೀಡಿದ ಉತ್ತರದಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
385 ಪ್ರಕರಣಗಳನ್ನು ಹಿಂದೆಗೆದುಕೊಳ್ಳುವ ಈ ಏಳು ಆದೇಶಗಳನ್ನು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಮತ್ತು ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದ 2020,ಫೆ.11ರಿಂದ ಬೊಮ್ಮಾಯಿ ಅವರು ಮುಖ್ಯಮಂತ್ರಿ ಮತ್ತು ಆರಗ ಜ್ಞಾನೇಂದ್ರ ಅವರು ಗೃಹಸಚಿವರಾಗಿದ್ದ 2023,ಫೆ.28ರ ನಡುವೆ ಹೊರಡಿಸಲಾಗಿದೆ.
ರಾಜ್ಯ ಸರಕಾರವು ಹಿಂದೆಗೆದುಕೊಂಡಿರುವ ಪ್ರಕರಣಗಳಲ್ಲಿ ಹೆಚ್ಚಿನವು ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದ್ದು,ಓರ್ವ ಬಿಜೆಪಿ ಸಂಸದ ಮತ್ತು ಶಾಸಕ ಸೇರಿದಂತೆ 1,000ಕ್ಕೂ ಅಧಿಕ ಆರೋಪಿಗಳನ್ನು ಮುಕ್ತಗೊಳಿಸಿದೆ.
182 ಪ್ರಕರಣಗಳ ಪೈಕಿ ಕೋಮು ಹಿಂಸಾಚಾರ ಸಂಬಂಧಿತ ಹೆಚ್ಚಿನ ಪ್ರಕರಣಗಳು 2013-2018ರ ನಡುವಿನ ಕಾಂಗ್ರೆಸ್ ಸರಕಾರದ ಅಧಿಕಾರಾವಧಿಯಲ್ಲಿ ದಾಖಲಾಗಿದ್ದವು.
2013-2018ರ ನಡುವೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಎಸ್ಡಿಪಿಐ ಮತ್ತು ಈಗ ನಿಷೇಧಿತ ಪಿಎಫ್ಐನ ಸುಮಾರು 1,600 ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ 176 ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಆದೇಶಿಸಿತ್ತು. ಈ ಪೈಕಿ ಹೆಚ್ಚಿನ ಪ್ರಕರಣಗಳು ನಿಷೇಧಾಜ್ಞೆ ಉಲ್ಲಂಘನೆಗೆ ಸಂಬಂಧಿಸಿದ್ದವು. ಸರಕಾರದ ಈ ಕ್ರಮಕ್ಕೆ ಬಿಜೆಪಿ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು.
ಬಿಜೆಪಿ ಸರಕಾರವು ಕೈಬಿಟ್ಟಿರುವ ಕೋಮು ಸಂಬಂಧಿತ 182 ಪ್ರಕರಣಗಳ ಪೈಕಿ 45 ಪ್ರಕರಣಗಳು ಡಿಸೆಂಬರ್ 2017ರಲ್ಲಿ ಪರೇಶ ಮೇಸ್ತಾ ಸಾವಿನ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಲಪಂಥೀಯ ಕಾರ್ಯಕರ್ತರು ಮುಸ್ಲಿಮರನ್ನು ಗುರಿಯಾಗಿಸಿಕೊಡು ನಡೆಸಿದ್ದ ಹಿಂಸಾಚಾರಗಳಿಗೆ ಸಂಬಂಧಿಸಿವೆ. ಮೇಸ್ತಾ ಸಾವು ಒಂದು ಆಕಸ್ಮಿಕ ಎಂದು ಸಿಬಿಐ ನಂತರ ತನ್ನ ತನಿಖಾ ವರದಿಯಲ್ಲಿ ತಿಳಿಸಿತ್ತು. ಈ 45 ಪ್ರಕರಣಗಳಲ್ಲಿ 300 ಜನರನ್ನು ಅರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಒಂದು ಪ್ರಕರಣದಲ್ಲಿ 66 ಜನರು ಕೊಲೆ ಯತ್ನ ಆರೋಪವನ್ನು ಎದುರಿಸುತ್ತಿದ್ದರು ಎಂದು indianexpress.com ವರದಿ ಮಾಡಿದೆ.
ಬಿಜೆಪಿ ಸರಕಾರವು 2020,ಫೆ.21ರಂದು ಹೊರಡಿಸಿದ್ದ ಮೊದಲ ಆದೇಶವು ರೈತರ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದವರಿಗೆ ಸೀಮಿತವಾಗಿದ್ದರೆ, ಇತರ ಆರು ಆದೇಶಗಳ ಪೈಕಿ ಹೆಚ್ಚಿನವುಗಳಲ್ಲಿ ಕನಿಷ್ಠ ಶೇ.50ರಷ್ಟು ಪ್ರಕರಣಗಳು ಕೋಮು ಘಟನೆಗಳಾಗಿದ್ದವು ಎಂದು ಅರ್ಟಿಐ ಉತ್ತರವು ತೋರಿಸಿದೆ. ಫೆ.2020 ಮತ್ತು ಆ.2020ರ ನಡುವೆ ಹೊರಡಿಸಲಾಗಿದ್ದ ಕೆಲವು ಆದೇಶಗಳು ಮೈಸೂರಿನ ಬಿಜೆಪಿ ಸಂಸದ ಪ್ರತಾಪ ಸಿಂಹ ಮತ್ತು ಹೊನ್ನಾಳಿಯ ಬಿಜೆಪಿ ಶಾಸಕ ರೇಣುಕಾಚಾರ್ಯರಂತಹ ಚುನಾಯಿತ ಜನಪ್ರತಿನಿಧಿಗಳಿಗೆ ಸಂಬಂಧಿಸಿದ್ದವು.
2020,ಆ.31ರ ಸರಕಾರಿ ಆದೇಶದ ಬಳಿಕ ಪ್ರಕರಣಗಳ ವಾಪಸಾತಿಯನ್ನು ಪ್ರಶ್ನಿಸಿ ಓರ್ವ ವಕೀಲರು ಮತ್ತು ಪಿಯುಸಿಎಲ್ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದು,ಈ ಬಗ್ಗೆ ವಿಚಾರಣೆ ಜಾರಿಯಲ್ಲಿದೆ ಹಾಗೂ 2020 ಮತ್ತು 2022ರ ನಡುವೆ ಪ್ರಕರಣಗಳ ಹಿಂದೆಗೆತಕ್ಕೆ ಆದೇಶಗಳನ್ನು ಹೊರಡಿಸಲಾಗಿರಲಿಲ್ಲ.
ಉಚ್ಚ ನ್ಯಾಯಾಲಯದ ಅನುಮತಿಯಿಲ್ಲದೆ ಹಾಲಿ ಅಥವಾ ಮಾಜಿ ಸಂಸದ/ಶಾಸಕರ ವಿರುದ್ಧದ ಕಾನೂನು ಕ್ರಮಗಳನ್ನು ಹಿಂದೆಗೆದುಕೊಳ್ಳುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಆಗಸ್ಟ್ 2021ರಲ್ಲಿ ಆದೇಶಿಸಿತ್ತು. ತನ್ನ ಅನುಮತಿಯಿಲ್ಲದೆ ಚುನಾಯಿತ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವೂ ಜುಲೈ 2022ರಲ್ಲಿ ಹೇಳಿತ್ತು.
ಹಿಂದು ಜಾಗರಣಾ ವೇದಿಕೆ ನಾಯಕ ಜಗದೀಶ ಕಾರಂತ ಅವರು ಪ್ರಕರಣಗಳ ವಾಪಸಾತಿ ಪ್ರಕ್ರಿಯೆಯ ಇನ್ನೋರ್ವ ಪ್ರಮುಖ ಫಲಾನುಭವಿಯಾಗಿದ್ದಾರೆ. ಅವರ ವಿರುದ್ಧ ದಕ್ಷಿಣ ಕನ್ನಡ, ಬಾಗಲಕೋಟ,ಬೆಂಗಳೂರು ಗ್ರಾಮೀಣ ಮತ್ತು ತುಮಕೂರುಗಳಲ್ಲಿ ದ್ವೇಷಭಾಷಣಗಳನ್ನು ಮಾಡಿದ್ದ ಆರೋಪವಿತ್ತು. ಅವರ ವಿರುದ್ಧದ ನಾಲ್ಕು ಪ್ರಕರಣಗಳನ್ನು ಕೈಬಿಡಲು 2022,ಅ.1ರಂದು ಆದೇಶವನ್ನು ಹೊರಡಿಸಲಾಗಿತ್ತು.
34 ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ನ್ಯಾಯಾಲಯಗಳಲ್ಲಿ ಅಗತ್ಯ ಅರ್ಜಿಗಳನ್ನು ಸಲ್ಲಿಸುವಂತೆ 2022,ಅ.1ರ ಆದೇಶದಲ್ಲಿ ಪ್ರಾಸಿಕ್ಯೂಷನ್ ಇಲಾಖೆಗೆ ಸೂಚಿಸಲಾಗಿತ್ತು. ಈ ಎಲ್ಲ ಪ್ರಕರಣಗಳು ಹಿಂದೆಗೆದುಕೊಳ್ಳಲು ಅರ್ಹವಲ್ಲ ಎಂದು ರಾಜ್ಯ ಪೊಲೀಸ್,ಪ್ರಾಸಿಕ್ಯೂಷನ್ ಇಲಾಖೆ ಮತ್ತು ಕಾನೂನು ಇಲಾಖೆ ಸಂಪುಟಕ್ಕೆ ವರದಿ ಸಲ್ಲಿಸಿದ್ದರೂ ಸರಕಾರವು ಈ ಆದೇಶವನ್ನು ಹೊರಡಿಸಿತ್ತು.
2023,ಮಾ.20ರಂದು ಶ್ರೀ ರಾಮ ಸೇನೆ ನಾಯಕ ಸಿದ್ದಲಿಂಗ ಸ್ವಾಮಿ ಮತ್ತು ಇತರರ ವಿರುದ್ಧದ ಪ್ರಕರಣವನ್ನು ಮುಚ್ಚಲಾಗಿದೆ. ಇವರೆಲ್ಲ ಎಪ್ರಿಲ್ 2016ರಲ್ಲಿ ಕಲಬುರಗಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪವನ್ನು ಹೊತ್ತಿದ್ದರು.
ವಾಪಸಾತಿಗಾಗಿ ಸರಕಾರದ ಆದೇಶಗಳನ್ನು ಹೆಚ್ಚಿನ ಪ್ರಕರಣಗಳಲ್ಲಿ ಜಾರಿಗೊಳಿಸಲಾಗಿದೆ. ಆದರೆ ಈ ತಿಂಗಳು ಉತ್ತರ ಕನ್ನಡ ಜಿಲ್ಲೆಯ ಸಿವಿಲ್ ನ್ಯಾಯಾಧೀಶರು ಮೇಸ್ತಾ ಪ್ರಕರಣದ ಬಳಿಕ ಕೋಮು ಹಿಂಸಾಚಾರಕ್ಕಾಗಿ 22 ಜನರ ವಿರುದ್ಧದ ಕಾನೂನು ಕ್ರಮವನ್ನು ಹಿಂದೆಗೆದುಕೊಳ್ಳುವಂತೆ 2013,ಫೆ.28ರ ಸರಕಾರದ ಆದೇಶವನ್ನು ಕಡೆಗಣಿಸಿದ್ದಾರೆ ಮತ್ತು ಪ್ರಕರಣವನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಂದ ವಿಚಾರಣೆಗೆ ಒಪ್ಪಿಸಿದ್ದಾರೆ.