ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು, ಎ.23: ಬಿಸಿಲಿನ ಬೇಗೆಗೆ ತತ್ತರಿಸಿದ್ದ ಉದ್ಯಾನನಗರಿ ಬೆಂಗಳೂರಿಗೆ ವರುಣನ ಸಿಂಚನವಾಗಿದೆ. ನಾಳೆಯಿಂದ ನಾಲ್ಕು ದಿನಗಳ ಕಾಲ ಬೆಂಗಳೂರು ಸೇರಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಕರಾವಳಿ ಭಾಗದಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೂರು ದಿನಗಳಿಂದ ರಾಜ್ಯದಲ್ಲಿ ಹಗುರ ಮಳೆಯಾಗುತ್ತಿದೆ. ಈಗ ಮಳೆಯ ಪ್ರಮಾಣ ಕೊಂಚ ಏರಿಕೆಯಾಗಲಿದೆ. ಕೆಲವು ಕಡೆ ಗುಡುಗು-ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಬೆಳಗಾವಿ, ಕೊಪ್ಪಳ, ಗದಗ ಭಾಗದಲ್ಲಿ ಮಳೆಯಾಗಲಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ. ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಮಳೆಯಾಗಲಿದೆ. ಕರಾವಳಿ ಮತ್ತು ದಾವಣಗೆರೆ ಭಾಗದಲ್ಲಿ ಒಣಹವೆ ಇರಲಿದ್ದು, ಮುಂಜಾಗೃತ ಕ್ರಮ ತೆಗದುಕೊಳ್ಳುವಂತೆ ಸೂಚಿಸಲಾಗಿದೆ.
24 ಗಂಟೆಯಲ್ಲಿ ಕುಂದಗೋಳ ಹಾಗೂ ದೊಡ್ಡಬಳ್ಳಾಪುರದಲ್ಲಿ 3 ಸೆಂ.ಮೀ. ಮಳೆಯಾಗಿದೆ. ಗೌರಿಬಿದನೂರು, ಚಿಕ್ಕಮಗಳೂರಿನ ಭಾಗಮಂಡಲದಲ್ಲಿ 2 ಸೆಂ.ಮೀ. ಮಳೆಯಾಗಿದೆ. ಕೊಡಗು, ಶಿವಮೊಗ್ಗ ಹಾಗೂ ಹಾಸನ ಭಾಗದಲ್ಲಿ ಸಣ್ಣ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ವ್ಯಾಪ್ತಿಯಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.







