ಶಾಸಕರ ಮಾನಹಾನಿ ಪ್ರಕರಣದ ಸಮಗ್ರ ತನಿಖೆಗೆ ಸಿಪಿಎಂ ಒತ್ತಾಯ

ಮಂಗಳೂರು, ಎ.23: ಶಾಸಕ ವೇದವ್ಯಾಸ ಕಾಮತ್ ತನ್ನ ಮಾನಹಾನಿಕರ ಸುದ್ದಿ ಪ್ರಕಟವಾಗದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಸಮಗ್ರ ತನಖೆಯಾಗಬೇಕು ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಒತ್ತಾಯಿಸಿದ್ದಾರೆ.
ನಗರದ ಉವರ್ರ್ಸ್ಟೋರ್ ಸುಂಕದಕಟ್ಟೆಯಲ್ಲಿ ಜರುಗಿದ ವಿವಿಧ ವಿಭಾಗದ ಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು.
ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೊಬ್ಬರು ಮಾನಹಾನಿ ಆಗುವಂತಹ ವಿಚಾರದ ಬಗ್ಗೆ ಕನಿಷ್ಟ ದೂರನ್ನು ಕೊಡದೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಶಾಸಕರ ಸಚ್ಚಾರಿತ್ಯದ ಬಗ್ಗೆ ಸಾರ್ವಜನಿಕರಿಗೆ ಅನುಮಾನಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಕೂಡಲೇ ಶಾಸಕ ವೇದವ್ಯಾಸ ಕಾಮತ್ ಸ್ಪಷ್ಟನೆ ನೀಡಬೇಕು ಎಂದು ಸುನೀಲ್ ಕುಮಾರ್ ಬಜಾಲ್ ಆಗ್ರಹಿಸಿದ್ದಾರೆ.
ಬಿಜೆಪಿಯ ಅನೇಕ ಶಾಸಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವ ಮೂಲಕ ಜನರ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ತರುತ್ತಿದ್ದಾರೆ. ಹಾಗಾದರೆ ಈ ಬಗ್ಗೆ ಬಿಜೆಪಿಯನ್ನು ನಿಯಂತ್ರಿಸುವ ಆರೆಸೆಸ್ಸ್‌ನ ನಿಲುವೇನು? ಜನರ ಬದುಕನ್ನು ರೂಪಿಸುವ ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿ ಜಾತಿ, ಧರ್ಮದ ಹೆಸರಿನಲ್ಲಿ ನಂಬಿಕೆಗಳನ್ನು ದುರುಪಯೋಗಪಡಿಸಿರುವುದಲ್ಲದೆ ಸಂಸ್ಕೃತಿ, ಸಂಸ್ಕಾರ ಆಚಾರ, ವಿಚಾರಗಳ ಬಗ್ಗೆ ಇತರರಿಗೆ ಬೊಗಳೆ ಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಬಜಾಲ್, ಇಂತಹವರನ್ನು ಮುಂದಿನ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿ ಜಾತ್ಯತೀತ ಶಕ್ತಿಗಳನ್ನು ಗೆಲ್ಲಿಸಲು ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ ಎಂದು ಕರೆ ನೀಡಿದರು.
ಹಿರಿಯ ಕಾರ್ಮಿಕ ಮುಖಂಡ ಮನೋಜ್ ಉರ್ವಸ್ಟೋರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಪ್ರದೀಪ್, ಇಕ್ಬಾಲ್, ಪ್ರಶಾಂತ್ ಎಂಬಿ, ರಾಜೇಶ್, ಸಿಐಟಿಯು ಮುಖಂಡರಾದ ಮಲ್ಲೇಶ್, ಪ್ರಕಾಶ್, ಡಿವೈಎಫ್‌ಐ ನಾಯಕರಾದ ಸುಕೇಶ್, ಪ್ರಶಾಂತ್ ಆಚಾರ್ಯ, ಹರಿಣಾಕ್ಷಿ,ದಲಿತ ಹಕ್ಕುಗಳ ಸಮಿತಿ ನಾಯಕರಾದ ರಘುವೀರ್,ನಾಗೇಂದ್ರ ಉಪಸ್ಥಿತರಿದ್ದರು.