ಐಪಿಎಲ್: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ
ಹರ್ಷಲ್ ಪಟೇಲ್ ಅಮೋಘ ಬೌಲಿಂಗ್, ಮ್ಯಾಕ್ಸ್‌ವೆಲ್, ಪ್ಲೆಸಿಸ್ ಅರ್ಧಶತಕ

ಬೆಂಗಳೂರು,ಎ.23: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಐಪಿಎಲ್‌ನ 32ನೇ ಪಂದ್ಯದಲ್ಲಿ 7 ರನ್‌ನಿಂದ ರೋಚಕ ಜಯ ದಾಖಲಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 190 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.
ರಾಜಸ್ಥಾನದ ಪರ ದೇವದತ್ತ ಪಡಿಕ್ಕಲ್(52 ರನ್, 34 ಎಸೆತ) ಅರ್ಧಶತಕ ಗಳಿಸಿದರೆ, ಯಶಸ್ವಿ ಜೈಸ್ವಾಲ್(47 ರನ್, 37 ಎಸೆತ), ಧ್ರುವ್ ಜುರೆಲ್(ಔಟಾಗದೆ 34 ರನ್, 16 ಎಸೆತ)ಹಾಗೂ ನಾಯಕ ಸಂಜು ಸ್ಯಾಮ್ಸನ್(22 ರನ್, 15 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಆರ್‌ಸಿಬಿ ಪರ ಹರ್ಷಲ್ ಪಟೇಲ್(3-32)ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (77 ರನ್, 44 ಎಸೆತ) ಹಾಗೂ ಎಫ್ ಡು ಪ್ಲೆಸಿಸ್(62 ರನ್, 39 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 189 ರನ್ ಗಳಿಸಿತು.





