ಅಂಬೇಡ್ಕರ್ ಸಂವಿಧಾನ ಶೋಷಿತರನ್ನು ರಾಷ್ಟ್ರಪತಿಯಾಗಿ, ಮನು ಸಂವಿಧಾನ ಗುಲಾಮರನ್ನಾಗಿಸುತ್ತದೆ: ಜ್ಞಾನ ಪ್ರಕಾಶ ಸ್ವಾಮೀಜಿ
‘ಭಾರತ ಭಾಗ್ಯವಿಧಾತ’ ಶೋಷಿತ ಸಮುದಾಯಗಳ ಸಾಂಸ್ಕೃತಿಕ ಮಹಾಜಾಥ ಉದ್ಘಾಟನೆ

ಉಡುಪಿ: ಅಂಬೇಡ್ಕರ್ ಸಂವಿಧಾನ ಶೋಷಿತರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ ಮನು ಸಂವಿಧಾನ ಗುಲಾಮರನ್ನಾಗಿಸುತ್ತದೆ. ಆದುದರಿಂದ ಅಂಬೇಡ್ಕರ್ ಸಂವಿಧಾನವನ್ನು ರಕ್ಷಣೆ ಮಾಡುವವರಿಗೆ ನಾವು ಮತ ಹಾಕಬೇಕೆ ಹೊರತು ಸಂವಿಧಾನವನ್ನು ನಾಶ ಮಾಡುವವರಿಗೆ ಅಲ್ಲ. ನಾವು ನಮ್ಮ ಮತವನ್ನು ಮಾರಾಟ ಮಾಡುತ್ತಿರುವ ಪರಿಣಾಮ ಇಂದು ದೇಶದ ಪ್ರಜಾಪ್ರಭುತ್ವ ದಿವಾಳಿ ಯಾಗಿದೆ ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಉಡುಪಿ ಜಿಲ್ಲೆಯ ಆಶ್ರಯದಲ್ಲಿ ಭಾರತೀಯ ಬೌದ್ಧ ಮಹಾಸಭಾ ಉಡುಪಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಉಡುಪಿ ಜಿಲ್ಲಾ ಕೆಥೋಲಿಕ್ ಮಹಾಸಭಾ, ಉಡುಪಿ ಜಿಲ್ಲಾ ಕ್ರೈಸ್ತ ಒಕ್ಕೂಟ ಮತ್ತು ಜಿಲ್ಲೆಯ ಸಮಸ್ತ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ 132ನೇ ಜನ್ಮ ದಿನಾಚರಣೆ ಪ್ರಯುಕ್ತ ರವಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ‘ಭಾರತ ಭಾಗ್ಯವಿಧಾತ’ ಶೋಷಿತ ಸಮುದಾಯಗಳ ಸಾಂಸ್ಕೃತಿಕ ಮಹಾಜಾಥ ಮತ್ತು ಶೈಕ್ಷಣಿಕ ಪ್ರೋತ್ಸಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪಂಚಾಯತ್‌ನಿಂದ ಪಾಲಿರ್ಮೆಂಟ್‌ವರೆಗೆ ಭವ್ಯ ಭಾರತದ ಭವಿಷ್ಯವನ್ನು ಬರೆದ ಅಂಬೇಡ್ಕರ್ ಭಾರತ ಭಾಗ್ಯವಿದಾತ. ಅಂಬೇಡ್ಕರ್ ಅಂದರೆ ಭಾರತ, ಭಾರತ ಅಂದರೆ ಅಂಬೇಡ್ಕರ್. ಆದರೆ ಇಂದು ಅಂಬೇಡ್ಕರ್ ಅವರ ಕನಸಿನ ಭಾರತ ನಮ್ಮ ಮುಂದೆ ಇಲ್ಲ. ಬದಲು ಮೃಗೀಯ ಭಾರತ ಇದೆ. ಮನುಷ್ಯ ಮನುಷ್ಯನನ್ನೇ ಹಾಡು ಹಗಲಿನಲ್ಲಿಯೇ ಕೊಲ್ಲುತ್ತಿದ್ದಾರೆ. ಇದು ಅಂಬೇಡ್ಕರ್ ಭಾರತ ಆಗಲು ಸಾಧ್ಯವಿಲ್ಲ ಎಂದರು.
ಇಂದು ನಮ್ಮ ಮುಂದೆ ನಕಲಿ, ಅಸಲಿ ಮತ್ತು ಸೀಝನ್ ಎಂಬ ಮೂರು ರೀತಿಯ ಅಂಬೇಡ್ಕರ್‌ವಾದಿಗಳಿದ್ದಾರೆ. ಇದರಲ್ಲಿ ಸೀಝನ್ ಮತ್ತು ನಕಲಿ ಅಂಬೇಡ್ಕರ್ ವಾದಿಗಳಿಂದ ದೇಶಕ್ಕೆ ಗಂಡಾಂತರ ಇದೆ. ನಾವು ನಿಜವಾದ ಅಂಬೇಡ್ಕರ್ ವಾದಿಗಳಾಗಬೇಕು. ನಮಗೆ ಧರ್ಮಕ್ಕಿಂತ ದೇಶ ಮುಖ್ಯವಾಗ ಬೇಕು. ಯಾವ ಧರ್ಮ, ಮಂದಿರಗಳು ದೇಶವನ್ನು ಉದ್ಧಾರ ಮಾಡಿಲ್ಲ. ದೇಶದ ಭವಿಷ್ಯ ಬದಲಾವಣೆ ಮಾಡಿರುವುದು ಅಂಬೇಡ್ಕರ್ ಕೊಟ್ಟಿರುವ ಮತದಾನದ ಹಕ್ಕು. ಮತದಾರರಿಂದ ಮಾತ್ರ ಈ ದೇಶದ ಬದಲಾವಣೆ ಮಾಡಲು ಸಾಧ್ಯ ಎಂದು ಅವರು ತಿಳಿಸಿದರು.
ಈ ದೇಶದಲ್ಲಿ ಇಂದು ಪ್ರಜಾಪ್ರಭುತ್ವ ಇಲ್ಲವಾಗಿದೆ. ನಮ್ಮ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಮನು ಸಂವಿಧಾನ ಈ ದೇಶದ ಹೆಣ್ಣು ಮಕ್ಕಳನ್ನು ಹೆರಿಗೆ ಕಾರ್ಖಾನೆಯನ್ನಾಗಿ ಮಾಡಿದೆ. ಅಂಬೇಡ್ಕರ್ ಇಲ್ಲದ ಭಾರತ ಶೂನ್ಯ. ಅಂಬೇಡ್ಕರ್ ಸಂವಿಧಾನದಲ್ಲಿ ಆದಿವಾಸಿ ಮಹಿಳೆ ದ್ರೌಪದಿ ಮುರ್ಮ ರಾಷ್ಟ್ರಪತಿ ಯಾದರೆ, ಮಹಾ ಭಾರತದಲ್ಲಿ ದ್ರೌಪದಿಯ ಸೀರೆ ಎಳೆದು ಅಪಮಾನ ಮಾಡ ಲಾಗುತ್ತದೆ. ಯಾವ ಸಂವಿಧಾನ ಬೇಕು ಎಂಬುದು ನೀವೇ ನಿರ್ಧಾರ ಮಾಡ ಬೇಕು ಎಂದು ಅವರು ಹೇಳಿದರು.
ಬೀದರ್ ಅಣದೂರ್ ಧಮ್ಮ ದರ್ಶನ ಭೂಮಿಯ ಭಂತೇ ವರಜ್ಯೋತಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಮಿತಿಯ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಠಲ್‌ದಾಸ್ ಬನ್ನಂಜೆ, ಡಾ.ಸಬಿತಾ ಗುಂಡ್ಮಿ, ಅನುರಾಗ್ ಜಿ., ಸರಸ್ವತಿ ಯುವಕ ಮಂಡಲ ಮಲ್ಪೆ ಇದರ ಪರವಾಗಿ ಅಧ್ಯಕ್ಷ ಸದಾನಂದ, ಕೃಷ್ಣ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು.
ಬಸವಾನಂದ ಸ್ವಾಮೀಜಿ, ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ಮೈಸೂರು ಮುಕ್ತ ವಿವಿಯ ಉಪ ನಿರ್ದೇಶಕ ಡಾ.ಕೆ.ಪಿ.ಮಹಾಲಿಂಗ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ರಾಘವೇಂದ್ರ, ಚಿಂತಕ ಪ್ರೊ.ಫಣಿರಾಜ್, ಪ್ರಮೀಳಾ ಜತ್ತನ್ನ, ಇದ್ರೀಸ್ ಹೂಡೆ ಮುಖ್ಯ ಅತಿಥಿಗಳಾಗಿದ್ದರು.
ಸಮಿತಿಯ ಜಿಲ್ಲಾ ಸಂಚಾಲಕ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ರುಗಳಾದ ಶ್ಯಾಮ್‌ರಾಜ್ ಬಿರ್ತಿ, ಶೇಖರ್ ಹೆಜಮಾಡಿ, ವಾಸುದೇವ ಮುದೂರು, ಹರೀಶ್ ಸಾಲ್ಯಾನ್ ಮಲ್ಪೆ, ವಿಶ್ವನಾಥ ಬೆಳ್ಳಂಪಳ್ಳಿ, ಪರಮೇಶ್ವರ ಉಪ್ಪೂರು, ರಮೇಶ್ ಕೋಟ್ಯಾನ್, ಆನಂದ ಬ್ರಹ್ಮಾವರ ಉಪಸ್ಥಿತರಿದ್ದರು.
ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಎಸ್.ಎಸ್.ಪ್ರಸಾದ್ ಮತ್ತು ಅಂಬೇಡ್ಕರ್ ಯುವ ಸೇನೆಯ ಭಗವಾನ್ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಶಂಕರ್ ದಾಸ್ ಚೇಂಡ್ಕಳ, ಮಂಜುನಾಥ ಬಾಳ್ಕುದ್ರು ಮತ್ತು ರವಿ ಬನ್ನಾಡಿ ಬಳಗದಿಂದ ಹೋರಾಟದ ಹಾಡುಗಳ ಗಾಯನ ನಡೆಯಿತು.
ಇದಕ್ಕೂ ಮೊದಲು ಬೋರ್ಡ್ ಹೈಸ್ಕೂಲ್‌ನಿಂದ ಆರಂಭಗೊಂಡ ಜಾಥಕ್ಕೆ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಾಥವು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಸಭಾಂಗಣದಲ್ಲಿ ಸಮಾಪ್ತಿಗೊಂಡಿತು. ಜಾಥದಲ್ಲಿ ಸಾಂಸ್ಕೃತಿಕ ತಂಡಗಳು, ಕೇರಳದ ಚಂಡೆ, ಡೊಳ್ಳು, ಕೀಲು ಕುದುರೆ ಮತ್ತು ವಿವಿಧ ವೇಷಗಳು ಗಮನ ಸೆಳೆದವು.
‘ಮಂತ್ರಗಳ ಮೂಲಕ ಮೋಸ’
ಮಂತ್ರಗಳ ಮೂಲಕ ಮೋಸ ಮಾಡಲಾಗುತ್ತದೆ. ನಮ್ಮ ತಲೆಗೆ ಮೌಢ್ಯದ ಸಂವಿಧಾನವನ್ನು ತುಂಬಿಸುತ್ತಿದ್ದಾರೆ. ನಾವು ವೈಜ್ಞಾನಿಕ, ವಿಚಾರವಂತಿಕೆ ಹಾಗೂ ಬದುಕನ್ನು ಬದಲಾಯಿಸುವ ವಿಚಾರಗಳ ಬಗ್ಗೆ ನಂಬಿಕೆ ಇಟ್ಟು ಕೊಳ್ಳಬೇಕು. ಇಲ್ಲದಿದ್ದರೆ ನಾವು ಮತ್ತೆ 100 ವರ್ಷ ಗುಲಾಮರಾಗಿಯೇ ಇರುತ್ತೇವೆ. ಅಂಬೇಡ್ಕರ್ ಪುತ್ಥಳಿಯಲ್ಲಿ ಅಲ್ಲ, ಪುಸ್ತಕದಲ್ಲಿದ್ದಾರೆ. ಮೆರವಣಿಗೆಯ ಅಂಬೇಡ್ಕರ್ ಗಿಂತ ಬರವಣಿಗೆಯ ಅಂಬೇಡ್ಕರ್‌ನತ್ತ ನಾವು ಮುಖ ಮಾಡಬೇಕು ಎಂದು ಮೈಸೂರು ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದರು.
ಈ ದೇಶದಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಆರ್ಥಿಕ ಅಂತರ ಮುಗಿಲು ಮುಟ್ಟಿದೆ. ಆ ನಿಟ್ಟಿನಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಅಂಬೇಡ್ಕರ್ ಸಂವಿಧಾನ ನಿಮ್ಮ ತಲೆಯಲ್ಲಿದ್ದರೆ ಬುದ್ಧನ ಕಡೆ ಮುಖ ಮಾಡ ಬೇಕು. ಬುದ್ಧ ಈ ಜಗತ್ತಿಗೆ ಅನಿವಾರ್ಯ. ನಮ್ಮದು ಬುದ್ಧ ಭೂಮಿಯೇ ಹೊರತು ಯುದ್ಧ ಭೂಮಿ ಅಲ್ಲ ಎಂದು ಅವರು ಹೇಳಿದರು.
‘ಮತವನ್ನು ಮಾರಾಟ ಮಾಡುವವರು ಅಂಬೇಡ್ಕರ್ ಹೆಸರು ಹೇಳಲು ಯೋಗ್ಯರಲ್ಲ ಮತ್ತು ಅವರೆಲ್ಲ ಅಂಬೇಡ್ಕರ್ ದ್ರೋಹಿಗಳಾಗುತ್ತಾರೆ. ಪ್ರಜಾ ಪ್ರಭುತ್ವ, ಸಂವಿಧಾನದ ಮೌಲ್ಯವನ್ನು ಕಾಪಾಡುವವರಿಗೆ ನಿಮ್ಮ ಮತವನ್ನು ಹಾಕಬೇಕು. ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಆಶಯವನ್ನು ಕಾಪಾಡು ವುದು ಮತ್ತು ಮನುಷ್ಯ ಮನುಷ್ಯ ರನ್ನು ಗೌರವಿಸುವ ಭಾರತ ಸೃಷ್ಠಿ ಮಾಡುವುದು ನಿಮ್ಮ ಮತದಾನದಲ್ಲಿದೆ. ಅಂಬೇಡ್ಕರ್ ಜೀವಂತವಾಗಿರುವುದು ಅಂದರೆ ಮತದಾನ ಹಕ್ಕನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವುದಾಗಿದೆ’
-ಜ್ಞಾನ ಪ್ರಕಾಶ ಸ್ವಾಮೀಜಿ, ಪೆದ್ದಿಮಠ, ಉರಿಲಿಂಗ, ಮೈಸೂರು











