ಸುದೀಪ್ ಪ್ರಚಾರಕ್ಕೆ ಬರುವುದು ಬೇಡ, ನನ್ನ ಕ್ಷೇತ್ರದಲ್ಲಿ ನಾನೇ ನಟ, ನಿರ್ದೇಶಕ ಎಂದ ಶಾಸಕ ಯತ್ನಾಳ್

ವಿಜಯಪುರ, ಎ.23: ‘ಚಿತ್ರನಟ ಸುದೀಪ್ ವಿಜಯಪುರಕ್ಕೆ ಪ್ರಚಾರಕ್ಕೆ ಬರುವುದು ಬೇಡ, ನಾನೇ ಚಿತ್ರನಟರಿಗಿಂತ ಹೆಚ್ಚಿನ ಪಾಪ್ಯುಲರ್ ಇದ್ದೇನೆ. ಅವರು ಯಾರೂ ಪ್ರಚಾರಕ್ಕೆ ಬರೋದಿಲ್ಲ, ಮೋದಿ, ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬರುತ್ತಾರೆ. ಯಾವುದೇ ಸಿನಿಮಾ ನಟರುಗಳು ನನಗೆ ಬೇಡ, ಚಿತ್ರ ನಟರಿಗಿಂತಲೂ ನಾನೇನು ಕಡಿಮೆ ಇಲ್ಲ. ನಿರ್ದೇಶನ, ನಟನೆ, ಕಥಾ ಸಂಕಲನ ನಾನೇ ಮಾಡುತ್ತೀನಿ ಎಂದು ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಕೇವಲ ಅವರಿಗೆ ವಯಸ್ಸಾಗಿತ್ತು ಎನ್ನುವ ಕಾರಣಕ್ಕೆ. ಮುಂದೆ ಅವರೇ ಶಾಸಕ ಸ್ಥಾನಕ್ಕೆ ನಿಲ್ಲುವುದಿಲ್ಲವೆಂದು ಘೋಷಣೆ ಮಾಡಿದ್ದಾರೆ. ಆದರೆ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಸೇರಿರುವುದು ಯಾವ ನ್ಯಾಯ? ತಾಕತ್ತು ಇದ್ದರೆ ಪಕ್ಷೇತರವಾಗಿ ಕಣದಲ್ಲಿ ನಿಂತು ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಈ ಹಿಂದೆ ಮುಸ್ಲಿಮ ಸಮುದಾಯದವರ ಮತಗಳು ಬೇಡ ಎಂದು ಹೇಳಿದ್ದೆ. ಹಿಂದೂಗಳ ಮತಗಳೇ ನನಗೆ ಸಾಕು. ಆ ಹೇಳಿಕೆಗೆ ನಾನು ಈಗಲೂ ಬದ್ಧ. ಆ ಹೇಳಿಕೆಯನ್ನು ನಾನು ವಾಪಸ್ ಪಡೆದಿಲ್ಲ. ಈಗಲೂ ಆ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.





