ಬ್ರಹ್ಮಾವರ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

ಬ್ರಹ್ಮಾವರ, ಎ.23: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಎ.21ರಂದು ರಾತ್ರಿ ಬಾರ್ಕೂರು ಮಸ್ಕಿಬೈಲು ಎಂಬಲ್ಲಿ ನಡೆದಿದೆ.
ಮಸ್ಕಿಬೈಲು ನಿವಾಸಿ ಮಧುಶ್ರೀ ಎಂಬವರು ಮಕ್ಕಳಿಗೆ ಶಾಲೆಗೆ ರಜೆ ಇದ್ದ ಕಾರಣ ಎ.12ರಂದು ಮನೆಗೆ ಬೀಗ ಹಾಕಿ ಗೋವಾಕ್ಕೆ ತೆರಳಿದ್ದು, ಎ.21ರಂದು ರಾತ್ರಿ ಮನೆಯ ಪ್ರವೇಶ ದ್ವಾರದ ಲಾಕರ್ ಸ್ಕ್ರೂ ಕಳಚಿ ಒಳಗೆ ಪ್ರವೇಶಿಸಿದ ಕಳ್ಳರು, ಬೆಡ್‌ರೂಂನ ಕಾಪಾಟಿನಲ್ಲಿದ್ದ 3 ಜೊತೆ ಕಿವಿಯೋಲೆ, ಚಿನ್ನದ ಗಟ್ಟಿ, ಚಿನ್ನದ ಪೆಂಡೆಂಟ್, ಒಂದು ಜೊತೆ ಚಿನ್ನದ ಮಾಟಿ, ಹಳೆಯ ತುಂಡಾದ ಚಿನ್ನಾಭರಣಗಳು ಮತ್ತು ಬೆಳ್ಳಿಯ ಕರಿಮಣಿ, ಬೆಳ್ಳಿಯ ಚೈನ್, ಬೆಳ್ಳಿಯ ಕೌಳಿಕೆಗಳು, ಸೌಟುಗಳು, ಹರಿವಾಣಗಳು, ತಂಬಿಗೆ, ಬೆಳ್ಳಿಯ ಉಡಿದಾರ, ಗೆಜ್ಜೆಗಳು, ಮಕ್ಕಳ ದೃಷ್ಟಿ ಮಣಿಸರ, ಸ್ಪಟಿಕದ ಸರ, ಬ್ರಾಸ್ಲೈಟ್ ಹಾಗೂ ಬೆಳ್ಳಿಯ 20 ಕಾಯಿನ್ ಹಾಗೂ 8,000ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 2,23,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





