ಮತ ಧರ್ಮದ ಆಧಾರದಲ್ಲಿ ಜನರ ವಿಭಜನೆ ಬೇಡ: ಡಾ.ಮೋಹನ್ ಆಳ್ವ

ಉಡುಪಿ : ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಗೆ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ನೀಡಿದ ಕೊಡುಗೆ ಅಪಾರ. ನೀವು ಆಡಳಿತದ ಉದ್ದೇಶ ಕೋಸ್ಕರ ಒಂದು ಜಿಲ್ಲೆಯನ್ನು ಹಲವಾರು ಜಿಲ್ಲೆಗಳನ್ನಾಗಿ ವಿಂಗಡಿಸಿ, ಒಂದು ತಾಲ್ಲೂಕನ್ನು ನಾಲ್ಕಾರು ತಾಲ್ಲೂಕುಗಳನ್ನಾಗಿ ವಿಂಗಡಿಸಿ, ಆದರೆ ಮತ ಧರ್ಮದ ಆಧಾರದಲ್ಲಿ, ಜಾತಿಯ ಆಧಾರ ದಲ್ಲಿ, ಜನರ ವಿಭಜನೆ ಮಾಡಬಾರದು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತೀಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವಾ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರ ಹಾಗೂ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮಾನವಿಕ ವಿಭಾಗ ಹಾಗೂ ಐಕ್ಯೂಎಸಿ ವಿಭಾಗದ ವತಿಯಿಂದ ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಲಾದ ವಿಭಜನೆ ಪೂರ್ವ ದಕ್ಷಿಣ ಕನ್ನಡ: ಶತಮಾನದ ನೋಟ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದಿಕ್ಸೂಚಿ ಭಾಷಣ ಮಾಡಿದ ಪ್ರೊ.ರಾಜರಾಮ ತೋಳ್ಪಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಆಗುತ್ತಿರುವಂತಹ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಸ್ಥಿತ್ಯಾಂತರಗಳು ಅನೇಕ ಹೊಸ ಬಗೆಯ ಆಂತಕಗಳನ್ನು, ತಲ್ಲಣಗಳನ್ನು ಸೃಷ್ಠಿಸಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಬಾಷಾ ಸಹ ಪ್ರಾದ್ಯಾಪಕ ಹಾಗೂ ಐಕ್ಯೂಎಸಿ ಸಂಚಾಲಕ ಪ್ರೊ. ಸೋಜನ್ ಕೆ.ಜಿ. ಸ್ವಾಗತಿಸಿದರು. ಸುಚಿತ್ರಾ ಟಿ ವಂದಿಸಿದರು. ಕೇಶವ ಮೂರ್ತಿ ಎಂ.ವಿ. ಕಾರ್ಯಕ್ರಮ ನಿರೂಪಿಸಿದರು.