ರಾಷ್ಟ್ರ ರಾಜಧಾನಿಯಲ್ಲಿ ಪತ್ರಕರ್ತನಿಗೆ ಚಾಕು ಇರಿದು ದರೋಡೆ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿ ಮಲಯಾಳಂ ಮೂಲದ ಪತ್ರಕರ್ತರೊಬ್ಬರನ್ನು ದಷ್ಕರ್ಮಿಗಳು ಚಾಕುವಿನಿಂದ ಇರಿದು ದರೋಡೆ ಮಾಡಿದ್ದಾರೆ.
ದಾಳಿಗೊಳಗಾದ ಪತ್ರಕರ್ತನನ್ನು ಡಿ ಧನ ಸುಮೋದ್ ಎಂದು ಗುರುತಿಸಲಾಗಿದ್ದು, ಅವರು ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್‌ನ ದಿಲ್ಲಿ ಬ್ಯೂರೋ ಮುಖ್ಯಸ್ಥರಾಗಿದ್ದಾರೆ.
ಗಾಯಗೊಂಡಿರುವ ಮಯೂರ್ ವಿಹಾರ್ ಹಂತ ನಿವಾಸಿ ಸುಮೋದ್ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಸುಮೋದ್ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೂವರು ಆರೋಪಿಗಳು ಸುಮೋದ್ ರ ಬಳಿ ಬಂದಿದ್ದು, ಮೊದಲಿಗೆ ಬೆಂಕಿಪೆಟ್ಟಿಗೆಯನ್ನು ಕೇಳಿದ್ದಾರೆ. ಇಲ್ಲ ಎಂದು ಹೇಳಿದಾಗ ಬೆದರಿಸಿ ಫೋನ್ ಮತ್ತು ವ್ಯಾಲೆಟ್ ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಸುಮೋದ್ ರನ್ನು ಹಿಡಿದ ದುಷ್ಕರ್ಮಿಗಳು ಬೆನ್ನು ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಪತ್ರಕರ್ತನಿಗೆ ಎರಡು ಬಾರಿ ಇರಿದಿದ್ದು, ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ.
ಸಂತ್ರಸ್ತ ಪತ್ರಕರ್ತ ವಿವಾಹಿತರಾಗಿದ್ದು, ಅವರ ಪತ್ನಿ ಕೇರಳದಲ್ಲಿ ಶಿಕ್ಷಕಿಯಾಗಿದ್ದಾರೆ. ಐಪಿಸಿ 394 ಮತ್ತು 397 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ





