ಮಂಗಳೂರು: ನೋವಿಗೋ ಸೊಲ್ಯುಶನ್ಸ್ ನೂತನ ಆಫ್ ಶೋರ್ ಡೆಲಿವರಿ ಸೆಂಟರ್ ಉದ್ಘಾಟನೆ

ಮಂಗಳೂರು, ಎ.23; ನಗರದ ಫಳ್ನೀರ್ ನಲ್ಲಿರುವ ಕರುಣಾ ಪ್ರೈಡ್ ಸೆಂಟರಿನ ಐದನೇ ಮಹಡಿಯಲ್ಲಿ ನೋವಿಗೋ ಸೊಲ್ಯುಶನ್ಸ್ ಐಟಿ ಕಂಪನಿಯ ನೂತನ ಬೃಹತ್ ಸುಸಜ್ಜಿತ ಆಫ್ ಶೋರ್ ಡೆಲಿವರ್ ಸೆಂಟರ್ ಅನ್ನು ಇನ್ಫೋಸಿಸ್ ಬಿಪಿಎಮ್ ಲಿ.ನ ಸಿಇಒ, ಎಂ.ಡಿ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಅನಂತ ರಾಧಾಕೃಷ್ಣನ್ ರವಿವಾರ ಸಂಜೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹತ್ತು ವರ್ಷಗಳ ಹಿಂದೆ ಆರಂಭಗೊಂಡ ನೋವಿಗೋ ಸಂಸ್ಥೆ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಒದಗಿಸಿ ಕೊಡುತ್ತಾ, ಜಾಗತಿಕ ಐಟಿ ಮಾರುಕಟ್ಟೆಯಲ್ಲಿ ಮಾಡಿರುವ ಅಸಾಮಾನ್ಯ ಸಾಧನೆ ಮಹತ್ವದ್ದಾಗಿದೆ ಎಂದರು.
ಸ್ಥಳೀಯ ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡು ಹೊಸ ಮಾರುಕಟ್ಟೆಯನ್ನು ಸೃಷ್ಟಿಮಾಡಿ ಕೊಳ್ಳಬೇಕಾದ ಸವಾಲು ಐ.ಟಿ ಸಂಸ್ಥೆಗಳಿಗಿದೆ. ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರ ಬೇಡಿಕೆಗಳು, ಬದಲಾಗುತ್ತಿರುವ ಮನೋ ಭಾವಗಳನ್ನು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಕೋವಿಡ್ ನಂತಹ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಿ ಸ್ಪಂದಿಸುವ ಮೂಲಕ ಸಂಸ್ಥೆ ಇನ್ನಷ್ಟು ಸ್ಪರ್ಧಾತ್ಮಕವಾಗಿ ಬೆಳೆಯಬಹುದು ಎಂಬುದನ್ನು ನೋವಿಗೋ ಸಂಸ್ಥೆ ಸಾಬೀತುಪಡಿಸಿದೆ ಎಂದು ಅನಂತ ರಾಧಾಕೃಷ್ಣನ್ ಶುಭ ಹಾರೈಸಿದರು.
ನೋವಿಗೋ ಸೊಲ್ಯುಶನ್ಸ್ ಕಂಪನಿಯ ಆಡಳಿತ ನಿರ್ದೇಶಕ ಮತ್ತು ಸಿಇಓ ಪ್ರವೀಣ್ ಕುಮಾರ್ ಕಲ್ಭಾವಿ ಮಾತನಾಡಿ, 2012ರಲ್ಲಿ ಮಂಗಳೂರು, ಬೆಂಗಳೂರು ನಗರದಲ್ಲಿ ಆರಂಭಗೊಂಡಿದ್ದ ನೋವಿಗೋ ಸೊಲ್ಯುಶನ್ಸ್ ಅಲ್ಪಾವಧಿಯಲ್ಲೇ ವೇಗವಾಗಿ ಬೆಳೆದಿದ್ದು, ಮೂರು ವರ್ಷಗಳಲ್ಲಿ ನಿರಂತರ ಶ್ರೇಷ್ಠ ಬೆಳವಣಿಗೆಯನ್ನು ದಾಖಲಿಸಿದೆ. ದುಬೈ, ಯುಎಇ, ಯುಕೆ, ಸಿಂಗಾಪುರದಲ್ಲಿ ಶಾಖೆಗಳಿದ್ದು ಡಲ್ಲಾಸ್ ಟೆಕ್ಸಾಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಮಂಗಳೂರು, ಬೆಂಗಳೂರು, ಚೆನ್ನೈ ಮತ್ತು ಕೊಚ್ಚಿಯಲ್ಲಿ ಶಾಖೆ ವಿಸ್ತರಿಸುತ್ತಿದ್ದು, ಮುಂದಿನ ವರ್ಷದಲ್ಲಿ ಕೆನಡಾ, ಕತರ್, ನೆದರ್‌ಲ್ಯಾಂಡ್ ದೇಶಗಳಲ್ಲಿ ಹೊಸ ಶಾಖೆಗಳು ಕಾರ್ಯಾಚರಿಸಲಿವೆ. ಪ್ರಸ್ತುತ 700ಕ್ಕೂ ಅಧಿಕ ಐಟಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಗತ್ತಿನಾದ್ಯಂತ ಸುಮಾರು 20 ದೇಶಗಳಲ್ಲಿ ಸಂಸ್ಥೆಗೆ ಗ್ರಾಹಕರಿದ್ದಾರೆ. ಸಿಎಸ್‌ಆರ್ ನಿಧಿಯಿಂದ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸೇರಿದಂತೆ ಸಮುದಾಯ ಸೇವೆಗಳಿಗೂ ಸಂಸ್ಥೆ ಕೊಡುಗೆ ನೀಡುತ್ತಾ ಬಂದಿದೆ. 2025ರ ವೇಳೆಗೆ 1,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ನೀಡುವ ಯೋಜನೆ ಹೊಂದಿದೆ' ಎಂದು ವಿವರಿಸಿದರು.
ನೋವಿಗೋ ಸೊಲ್ಯುಶನ್ಸ್ ಸಹಸ್ಥಾಪಕ ಹಾಗು ಚೀಫ್ ಕಸ್ಟಮರ್ ಆಫೀಸರ್ ಶಿಹಾಬ್ ಕಲಂದರ್ ಸ್ವಾಗತಿಸಿದರು. ಸಹ ಸ್ಥಾಪಕ ಹಾಗು ಚೀಫ್ ಆಪರೇಟಿಂಗ್ ಆಫೀಸರ್ ಮೊಹಮ್ಮದ್ ಜರೂದ್ ಉಪಸ್ಥಿತರಿದ್ದರು. ಸಹಸ್ಥಾಪಕ ಹಾಗು ಚೀಫ್ ಟೆಕ್ನಾಲಜಿ ಅಫೀಸರ್ ಮೊಹಮ್ಮದ್ ಹನೀಫ್ ವಂದಿಸಿದರು.
ರವಿವಾರ ಉದ್ಘಾಟನೆಯಾದ ನೂತನ ಆಫ್ ಶೋರ್ ಡೆಲಿವರಿ ಸೆಂಟರ್ 15 ಸಾವಿರ ಚದರ ಅಡಿಯ ಅತ್ಯಂತ ವಿಶಾಲ, ಆಕರ್ಷಕ ವಿನ್ಯಾಸದ ಹಾಗು ಅತ್ಯಾಧುನಿಕ ಸೌಲಭ್ಯಗಳುಳ್ಳ ಕಚೇರಿಯಾಗಿದೆ. ಇದರಲ್ಲಿ 220 ಮಂದಿ ಸಿಬ್ಬಂದಿಗೆ ಬೇಕಾದ ಎಲ್ಲ ಸವಲತ್ತುಗಳಿದ್ದು ಅಂತರ್ ರಾಷ್ಟ್ರೀಯ ಐಟಿ ಗ್ರಾಹಕರ ಅಗತ್ಯಗಳಿಗೆ ಬೇಕಾದಂತೆ ಇದನ್ನು ರೂಪಿಸಲಾಗಿದೆ.