ವಿಶ್ವಯುದ್ಧದ ಸಂದರ್ಭ ಮುಳುಗಿದ್ದ ಹಡಗು ಪತ್ತೆ

ಟೋಕಿಯೊ, ಎ.23: ಫಿಲಿಪ್ಪೀನ್ಸ್‌ನ ಸಮುದ್ರದಲ್ಲಿ ಮುಳುಗಿದ್ದ ಆಸ್ಟ್ರೇಲಿಯಾದ ಹಡಗಿನ ಅವಶೇಷವನ್ನು ದಕ್ಷಿಣ ಚೀನಾ ಸಮುದ್ರಾಳದಲ್ಲಿ ಆಳಸಮುದ್ರ ಸರ್ವೆ ತಜ್ಞರು ಪತ್ತೆಹಚ್ಚಿದ್ದಾರೆ ಎಂದು ‘ಇಂಡಿಪೆಂಡೆಂಟ್’ ವರದಿ ಮಾಡಿದೆ.
864 ಆಸ್ಟ್ರೇಲಿಯನ್ ಯೋಧರಿದ್ದ, ಎಸ್‌ಎಸ್ ಮಾಂಟೆವಿಡೊ ಮರು ಎಂಬ ರಹಸ್ಯ ಕೈದಿ-ಯುದ್ಧಸಾರಿಗೆ ಹಡಗು 1942ರ ಜುಲೈಯಲ್ಲಿ ಫಿಲಿಪ್ಪೀನ್ಸ್ ಬಳಿಯ ಸಮುದ್ರದಲ್ಲಿ ಮುಳುಗಿತ್ತು. 84 ವರ್ಷಗಳ ಬಳಿಕ ನೌಕೆಯನ್ನು ಲುಝಾನ್ ದ್ವೀಪದ ವಾಯವ್ಯದಲ್ಲಿ ಪತ್ತೆಹಚ್ಚಲಾಗಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಘೋಷಿಸಿದ್ದಾರೆ. ಈ ಹಡಗು ಪಪುವಾ ನ್ಯೂಗಿನಿಯಾದಿಂದ ಚೀನಾದ ಹೈನಾನ್‌ನತ್ತ ಪ್ರಯಾಣಿಸುತ್ತಿದ್ದಾಗ ಅಮೆರಿಕದ ಸಬ್‌ಮೆರಿನ್‌ನ ಕ್ಷಿಪಣಿ ದಾಳಿಗೆ ಗುರಿಯಾಗಿ ಮುಳುಗಿತ್ತು.
ಸಮುದ್ರ ಪುರಾತತ್ವಶಾಸ್ತ್ರ ಮತ್ತು ಆಳಸಮುದ್ರ ವಿಶೇಷಜ್ಞರ ಸರ್ವೆ ತಂಡವು ಆಸ್ಟ್ರೇಲಿಯಾದ ರಕ್ಷಣಾ ಇಲಾಖೆಯ ನೆರವಿನಿಂದ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಸಮುದ್ರದ ಸುಮಾರು 13,123 ಅಡಿ ಆಳದಲ್ಲಿ ಹಡಗಿನ ಅವಶೇಷ ಪತ್ತೆಯಾಗಿದೆ ಎಂದು ಸರಕಾರ ಘೋಷಿಸಿದೆ.
ಹಡಗು ಮುಳುಗಿದ ದುರಂತದಲ್ಲಿ ವಿವಿಧ ದೇಶಗಳ ಯುದ್ಧ ಕೈದಿಗಳು ಹಾಗೂ ಪ್ರಜೆಗಳ ಸಹಿತ 1000ಕ್ಕೂ ಅಧಿಕ ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.