ಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶಹಾಬುದ್ದೀನ್ ಪ್ರಮಾಣ ವಚನ ಸ್ವೀಕಾರ

ಢಾಕಾ: ಹಿರಿಯ ರಾಜಕಾರಣಿ ಮುಹಮ್ಮದ್ ಶಹಾಬುದ್ದೀನ್ ಅವರು ಬಾಂಗ್ಲಾದೇಶದ 22 ನೇ ಅಧ್ಯಕ್ಷರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು,
ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಭಾಗವಹಿಸಿದ್ದ ಸರಕಾರಿ ಸಮಾರಂಭದಲ್ಲಿ ಸೋಮವಾರ ಶಹಾಬುದ್ದೀನ್ ಪ್ರಮಾಣವಚನ ಸ್ವೀಕರಿಸಿದರು.
ಬಂಗಬಾಬನ್‌ನ ಐತಿಹಾಸಿಕ ದರ್ಬಾರ್ ಹಾಲ್‌ನಲ್ಲಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅವರು 73 ವರ್ಷದ ಶಹಾಬುದ್ದೀನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಹಸೀನಾ ಹಾಗೂ ನೂತನ ಅಧ್ಯಕ್ಷರ ಕುಟುಂಬ ಸದಸ್ಯರಲ್ಲದೆ, ರಾಜಕಾರಣಿಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಹಿರಿಯ ಸಿವಿಲ್ ಹಾಗೂ ಮಿಲಿಟರಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಹಾಬುದ್ದೀನ್ ಅವರು ಅಬ್ದುಲ್ ಹಮೀದ್ ಉತ್ತರಾಧಿಕಾರಿಯಾಗಿದ್ದಾರೆ. ಹಮೀದ್ ಅವರ ಅಧಿಕಾರಾವಧಿ ರವಿವಾರ ಕೊನೆಗೊಂಡಿತು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಶಹಾಬುದ್ದೀನ್ ಅವರು ಅಧ್ಯಕ್ಷರ ಪ್ರಮಾಣ ವಚನ ಪತ್ರಕ್ಕೆ ಸಹಿ ಹಾಕಿದರು.
ಈ ವರ್ಷದ ಫೆಬ್ರವರಿಯಲ್ಲಿ ಆಡಳಿತಾರೂಢ ಅವಾಮಿ ಲೀಗ್‌ನ ಅಭ್ಯರ್ಥಿಯಾಗಿ ಅವರು ಅವಿರೋಧವಾಗಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದರು.