ನನಗೆ ಜೀವ ಬೆದರಿಕೆ ಇದೆ ಸೂಕ್ತ ಭದ್ರತೆ ಒದಗಿಸಿ: ರಹೀಂ ಉಚ್ಚಿಲ್

ಮಂಗಳೂರು,ಎ.24: ಕಳೆದ 11 ವರ್ಷಗಳ ಹಿಂದೆ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದುದರಿಂದ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರ ಪಕ್ಷ ಭೇದ ಮಾಡದೆ ನನಗೆ ಗನ್ ಮ್ಯಾನ್ ಭದ್ರತೆ ಕಲ್ಪಿಸಿತ್ತು. ಆದರೆ, ಚುನಾವಣಾ ಘೋಷಣೆಯಾದ ಬಳಿಕ ಸರಕಾರ ನನ್ನ ಗನ್ ಮ್ಯಾನ್ ಭದ್ರತೆ ವಾಪಸ್ಸು ಪಡೆದುಕೊಂಡಿದೆ.ಇದರಿಂದ ನನಗೆ ಆತಂಕ ಉಂಟಾಗಿದೆ. ನನ್ನಜೀವಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಾನು ಆರ್ಥಿಕವಾಗಿ ಹಿಂದುಳಿದಿದ್ದೇನೆ. ಅಲ್ಲದೇ ನನ್ನ ಮೇಲೆ ಈಗಾಗಲೇ 11 ಬಾರಿ ಕೊಲೆಯತ್ನ ನಡೆದಿದೆ. ಆದುದರಿಂದ ನನಗೆ ಗನ್ ಮ್ಯಾನ್ ಭದ್ರತೆ ಒದಗಿಸುವಂತೆ ಡಿಸಿಪಿಯವರಿಗೆ ಮನವಿಯನ್ನು ಮಾಡಿದ್ದೇನೆ.
ರಾಷ್ಟ್ರೀಯತೆಗೆ ಪೂರಕವಾದ ವಿಚಾರದಲ್ಲಿ ಟಿ.ವಿ ಡಿಬೇಟ್, ಭಾಷಣ ಹಾಗೂ ಚರ್ಚೆ ನಡೆಸಿದ್ದೇನೆಯೇ ಹೊರತಾಗಿ ನನ್ನ ಸಮುದಾಯದ ವಿರುದ್ಧ ಅಥವಾ ಧರ್ಮದ ವಿರುದ್ಧ ಯಾರ ಮನಸ್ಸನ್ನೂ ಕೂಡ ನೋಯಿಸಿಲ್ಲ. ಹೀಗಿದ್ದರೂ ನನ್ನ ಹಳೆಯ ಭಾಷಣದ ತುಣುಕನ್ನು ಎಡಿಟ್ ಮಾಡಿ ಕೆಲವರು ವೈರಲ್ ಮಾಡುವ ಮೂಲಕ ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ ಇದನ್ನೆಲ್ಲ ನಿಲ್ಲಿಸಬೇಕು. ನನ್ನ ಮಾತು, ನಡೆ-ನುಡಿಯಿಂದಾಗಿ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನನ್ನ 80 ವರ್ಷ ವಯಸ್ಸಿನ ತಾಯಿ ಆಸೀಯಮ್ಮ ನಿಗೋಸ್ಕರ ಕೊಲೆ ಸಂಚು ನಡೆಸುವ ಸಂಘಟನೆಗಳು ಪ್ರಯತ್ನವನ್ನು ನಿಲ್ಲಿಸುವಂತೆ ವಿನಂತಿ ಮಾಡುವುದಾಗಿ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಹೀಂ ಉಚ್ಚಿಲ್ ರವರ ತಾಯಿ ಆಸೀಯಮ್ಮ ಹಾಗೂ ಇತರರು ಉಪಸ್ಥಿತರಿದ್ದರು.