ಪುಲಿಕೇಶಿನಗರ ಕ್ಷೇತ್ರ: ಕಾಂಗ್ರೆಸ್ ತೊರೆದು ಬಿಎಸ್ಪಿಯಿಂದ ಕಣಕ್ಕಿಳಿದ ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು, ಎ.24: ಇಲ್ಲಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಬಹುಜನ ಸಮಾಜ ಪಕ್ಷ(ಬಿಎಸ್ಪಿ)ವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಸೋಮವಾರ ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಉಸ್ತುವಾರಿ ಮಾರಸಂದ್ರ ಮುನಿಯಪ್ಪ ನೇತೃತ್ವದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು ತಮ್ಮ ಬೆಂಬಲಿಗರೊಂದಿಗೆ ಬಿಎಸ್ಪಿ ಸೇರಿದ್ದು, ಪಕ್ಷದಿಂದಲೇ ಚುನಾವಣೆ ಎದುರಿಸಲಿದ್ದಾರೆ.
ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆ ಪುಲಿಕೇಶಿ ನಗರ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಬಹುಜನ ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ 81 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಬಿಎಸ್ಪಿ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಪುಲಿಕೇಶನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರು ಅಲ್ಪಸಂಖ್ಯಾತರು, ದಲಿತರ ಒಗ್ಗೂಡಿ ಇರಲು ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ.ಅದೇ ರೀತಿ, ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ರಾಜಕಾರಣಕ್ಕಾಗಿ ಅವರ ವಿರುದ್ಧ ಅಪಪ್ರಚಾರ ಮಾಡಿ, ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಬಿಎಸ್ಪಿ ಪಕ್ಷವೂ ಎಲ್ಲ ವರ್ಗಗಳ ಅಭಿವೃದ್ಧಿಗೆ ದುಡಿಯುತ್ತಿದೆ. ಹೀಗಾಗಿಯೇ, ಬಿಎಸ್ಪಿಯಿಂದ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಪಕ್ಷದ ಮೂಲಕ ಕಣಕ್ಕೆ ಇಳಿಸಲಾಗಿದ್ದು, ಭಾರೀ ಬಹುಮತದಿಂದ ಗೆದ್ದು ಬರುವ ವಿಶ್ವಾಸ ಇದೆ ಎಂದು ಅವರು ನುಡಿದರು.

.jpeg)