ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿರಿ ಕಾವ್ಯದ ಕಣಜ ಮಾಚಾರು ಗೋಪಾಲ ನಾಯ್ಕ ನಿಧನ

ಉಡುಪಿ : ತುಳುನಾಡಿನ ಹಿರಿಯ ಜನಪದ ಕಲಾವಿದ, ತುಳು ಸಿರಿ ಕಾವ್ಯದ ಕಣಜ ಎಂದೇ ಖ್ಯಾತಿ ಪಡೆದು 2005ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮಾಚಾರು ಗೋಪಾಲ ನಾಯ್ಕ್ (85) ಅವರು ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪತ್ನಿ, ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಸಿರಿ ಸಂಧಿ ಪಾಡ್ದನದ 15,683 ಸಾಲುಗಳ ಸುಧೀರ್ಘ ಪಠ್ಯವನ್ನು ನಿರರ್ಗಳವಾಗಿ ಕಂಠಪಾಠದ ಮೂಲಕ ಹಾಡುತಿದ್ದ ಇವರು ಸಿರಿ ಪಾಡ್ದನಗಳ ಕುರಿತು 80ರ ದಶಕದಲ್ಲಿ ಸಂಶೋಧನೆ ನಡೆಸಿದ ಜನಪದ ವಿದ್ವಾಂಸ ಫಿನ್ಲೆಂಡಿನ ಡಾ.ಲ್ಯಾರಿ ಹ್ಯಾಂಕೋ ಅವರಿಗೆ ಮಾರ್ಗದರ್ಶಕರಾಗಿ ಸಿರಿಸಂಧಿ ಪಠ್ಯದ ಸಂಗ್ರಹಕ್ಕೆ ನೆರವಾಗಿದ್ದರು.
ತುಳು ಜನಪದ, ಪುರಾಣ ಹಾಗೂ ಪರಂಪರೆಗಳ ಕುರಿತು ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದ ಗೋಪಾಲ ನಾಯ್ಕ, ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ (ಆರ್‌ಆರ್‌ಸಿ) ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸಿರಿ ಪಾಡ್ದನ ಪದ್ಯದ ದಾಖಲೀಕರಣದಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದರು.
ಆರ್‌ಆರ್‌ಸಿಯಲ್ಲಿ ಸಂತಾಪ ಸಭೆ: ಮಂಗಳೂರಿನಲ್ಲಿ ನಿಧನರಾದ ಸಿರಿಪಾಡ್ಡನದ ಕಣಜ ಎಂದೇ ಹೆಸರಾದ ಮಾಚಾರು ಗೋಪಾಲ ನಾಯ್ಕ ಅವರ ನಿಧನಕ್ಕೆ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ವತಿ ಯಿಂದ ಸಂತಾಪ ಸಭೆ ಇಂದು ಆರ್‌ಆರ್‌ಸಿಯ ಸಭಾಂಗಣದಲ್ಲಿ ಖ್ಯಾತ ಜಾನಪದ ವಿದ್ವಾಂಸ ಡಾ.ಬಿ.ಎ ವಿವೇಕ ರೈ ಅಧ್ಯಕ್ಷತೆಯಲ್ಲಿ ನಡೆಯಿತು.
ಸಿರಿ ಆರಾಧನೆಯಲ್ಲಿ ಮುಖ್ಯ ಪಾತ್ರ ನಿರ್ವಸಿದ ಗೋಪಾಲ ನಾಯ್ಕ ಒಬ್ಬ ಕಲಾವಿದರಲ್ಲದೆ, ವಿದ್ವಾಂಸರೂ ಆಗಿದ್ದರು. ಫಿನ್ಲೆಂಡ್‌ನ ಲ್ಯಾರಿ ಹ್ಯಾಂಕೊ ಹಾಗೂ ಪ್ರೊ.ಕು.ಶಿ ಹರಿದಾಸ ಭಟ್ ನೇತೃತ್ವದಲ್ಲಿ ಆರ್‌ಆರ್‌ಸಿಯಲ್ಲಿ ನಡೆಸಿದ ಸಿರಿ ಪಾಡ್ದನ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖರಾಗಿದ್ದರು. ಅವರು ತುಳುನಾಡಿನ ಹೋಮರ್. ಅವರ ಜ್ಞಾನ ಸಂಪತ್ತು, ಕಾವ್ಯಕಟ್ಟುವ ಪ್ರತಿಭೆ ವಿಶ್ಲೇಷಣೆಯ ರೀತಿ ಬೆರಗು ತರಿಸುವಂತಿತ್ತು ಎಂದು ಪ್ರೊ. ರೈ ಗೋಪಾಲ ನಾಯ್ಕರಿಗೆ ಶೃದ್ದಾಂಜಲಿ ಅರ್ಪಿಸುತ್ತಾ ಹೇಳಿದರು.
ಇನ್ನೊಬ್ಬ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರು ಮಾತನಾಡಿ ಗೋಪಾಲ ನಾಯ್ಕ್ ತುಳುನಾಡಿನ ಸಾಂಸ್ಕೃತಿಕ ಲೋಕದ ದೈತ್ಯರು. ಅವರ 250 ಗಂಟೆ ವೀಡಿಯೊ, 500 ಗಂಟೆ ಆಡಿಯೋ ಹಾಗೂ 5000 ಚಿತ್ರಗಳ ಸಂಗ್ರಹ ಆರ್‌ಆರ್‌ಸಿ ಸಂಗ್ರಹದಲ್ಲಿದೆ. ಇವುಗಳಲ್ಲಿ ಕಾವ್ಯದ ಪ್ರಸ್ತುತಿ ಹಾಗೂ ಸಿರಿ ಆರಾಧನೆಯ ವಿವರವಿದೆ. ಅವರೊಬ್ಬ ಮಹಾ ವಿದ್ವಾಂಸ ಎಂದು ಬಣ್ಣಿಸಿ ತುಳು ಪಾಡ್ದನ ಲೋಕಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು.
ಗೋಪಾಲ ನಾಯ್ಕ್ ಅವರಿಗೆ 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ, ಕರ್ನಾಟಕ ತುಳು ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಮೃತರ ಆತ್ಮಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಪ್ರೊ.ಎ.ವಿ.ನಾವಡ, ಡಾ.ಎಸ್.ಡಿ ಶೆಟ್ಟಿ, ಪ್ರೊ.ಮುರಳೀಧರ ಉಪಾಧ್ಯಾಯ, ಡಾ.ಎನ್.ಟಿ ಭಟ್, ಡಾ.ಮಹಾಬಲೇಶ್ವರ ರಾವ್, ಡಾ. ಪಾದೇಕಲ್ಲು ವಿಷ್ಣು ಭಟ್, ಡಾ.ಅರುಣ್ ಕುಮಾರ್ ಎಸ್.ಆರ್, ಡಾ.ರೇಖಾ ಬನ್ನಾಡಿ, ಕೆ.ಎಲ್. ಕುಂಡಂತಾಯ ಹಾಗೂ ಆರ್‌ಆರ್‌ಸಿಯ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು.