ಉಡುಪಿ: 5 ಕ್ಷೇತ್ರಗಳ ಸ್ಪರ್ಧಾಕಣದಲ್ಲಿ ಒಟ್ಟು 35 ಮಂದಿ; 7 ಮಂದಿಯಿಂದ ನಾಮಪತ್ರ ಹಿಂದೆಗೆತ

ಉಡುಪಿ, ಎ.24: ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಸ್ಪರ್ಧಾಕಣದಲ್ಲಿ ಒಟ್ಟು 35 ಮಂದಿ ಅಭ್ಯರ್ಥಿಗಳು ಉಳಿದು ಕೊಂಡಿ ದ್ದಾರೆ. ನಾಮಪತ್ರ ಸಲ್ಲಿಸಿದವರಲ್ಲಿ ಏಳು ಮಂದಿ ತಮ್ಮ ನಾಮಪತ್ರ ಗಳನ್ನು ವಾಪಾಸು ಪಡೆದರು.
ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಜಿಲ್ಲೆಯಲ್ಲಿ ಕ್ರಮಬದ್ಧ ನಾಮಪತ್ರ ಸಲ್ಲಿಸಿದ ಒಟ್ಟು 42 ಮಂದಿಯಲ್ಲಿ 7 ಮಂದಿ ಸ್ಪರ್ಧಾಕಣದಿಂದ ಹಿಂದೆ ಸರಿಯುವ ಮೂಲಕ ಕೊನೆಗೆ 35 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಅಂತಿಮವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 9, ಕುಂದಾಪುರದಲ್ಲಿ 5, ಉಡುಪಿಯಲ್ಲಿ 7, ಕಾಪುವಿನಲ್ಲಿ 5 ಹಾಗೂ ಕಾರ್ಕಳದಲ್ಲಿ 9 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದುಕೊಂಡಿದ್ದಾರೆ.
ಇಂದು ಜಿಲ್ಲೆಯಲ್ಲಿ ನಾಮಪತ್ರಗಳನ್ನು ಹಿಂಪಡೆದವರ ವಿವರ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ನಾಮಪತ್ರವನ್ನು ಹಿಂದೆಗೆದು ಕೊಂಡಿಲ್ಲ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಜಯರಾಜ್, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ದೀನ ಪ್ರಭಾಕರ ಸಾಲ್ಯಾನ್, ಕೆ.ಕೃಷ್ಣಮೂರ್ತಿ ಆಚಾರ್ಯ, ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ರಝಾಕ್ ಶಾಬನ್ ಅಹ್ಮದ್ ಮತ್ತು ಅಬ್ದುಲ್ ರೆಹಮಾನ್ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣ ಶೆಟ್ಟಿ ಮತ್ತು ಕೆ.ಹರೀಶ್ ಪೂಜಾರಿ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.