ಉಡುಪಿ: ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜನೆ

ಉಡುಪಿ : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ ಮತಗಟ್ಟೆ ಅಧಿಕಾರಿಗಳ ನಿಯೋಜನೆ ಕುರಿತಂತೆ ಚುನಾವಣಾ ಆಯೋಗದ ತಂತ್ರಾಂಶದ ಮೂಲಕ, ಕರ್ತವ್ಯ ನಿಯೋಜನೆಯ ೨ ಹಂತದ ಕಾರ್ಯವು ಎಲ್ಲಾ ವಿಧಾನಸಭಾ ಕ್ಷೇತ್ರಗಳ ವೀಕ್ಷಕರ ಸಮ್ಮುಖದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆಯಿತು.
ಈ ಕಾರ್ಯದಲ್ಲಿ ಚುನಾವಣಾ ಕರ್ತವ್ಯದ ತರಬೇತಿ ನಿಯೋಜಿಸಲಾದ ಮತ್ತು ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿ ಸಿಬ್ಬಂದಿಗಳು ಮತ್ತು ಮೈಕ್ರೋ ಅಬ್ಸರ್‌ವರ್‌ಗಳ ವಿವರಗಳನ್ನು ಮತ್ತು ಕರ್ತವ್ಯಕ್ಕೆ ನಿಯೋಜಿಸಲಾದ ಸ್ಥಳಗಳನ್ನು ತಂತ್ರಾಂಶದಲ್ಲಿ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ ವೀಕ್ಷಕ ತುಕಾರಾಂ ಹರಿಬಾವು ಮುಂಡೆ, ಕಾರ್ಕಳ ಕ್ಷೇತ್ರದ ವೀಕ್ಷಕ ಆಂದ್ರ ವಂಶಿ, ಬೈಂದೂರು ಕ್ಷೇತ್ರದ ವೀಕ್ಷಕ ಅಣ್ಣ ದಿನೇಶ್ ಕುಮಾರ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಎನ್‌ಐಸಿ ಮುಖ್ಯಸ್ಥ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.