ಸ್ಪಿಕ್‌ಮೆಕೆ ಸ್ಥಾಪಕ ಪದ್ಮಶ್ರೀ ಡಾ.ಕಿರಣ್ ಸೇಥ್ ಜೊತೆ ಸಂವಾದ

ಕುಂದಾಪುರ, ಎ.24: ಇಲ್ಲಿನ ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಹೊಸದಿಲ್ಲಿಯ ಐಐಟಿಯ ನಿವೃತ್ತ ಪ್ರಾಧ್ಯಾಪಕ ಹಾಗೂ ಸ್ಪಿಕ್‌ಮಕೆ ಸಂಸ್ಥೆಯ ಸ್ಥಾಪಕ ಪದ್ಮಶ್ರೀ ಡಾ.ಕಿರಣ್ ಸೇಥ್‌ರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕಿರಣ್ ಸೇಥ್, ಮನಸ್ಸನ್ನು ಬೇಕಾದ ಕಡೆ ಕೇಂದ್ರಿಕರಿಸುವುದು ಹೇಗೆಂಬು ದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ದಿಸೆಯಲ್ಲಿ ಯೋಗ ಹಾಗೂ ಶಾಸ್ತ್ರೀಯ ಸಂಗೀತದ ಮಹತ್ವವನ್ನು ಅವರು ವಿವರಿಸಿದರು. ಯಾವ ತರಬೇತಿ ಇಲ್ಲದೇ ಐಐಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯ ಉದಾಹರಣೆಯನ್ನು ನೀಡಿ ಮನದಟ್ಟು ಮಾಡಿದರು.
ಮನಸ್ಸು ಹುಚ್ಚು ಮಂಗನ ಹಾಗೆ. ಆದರೆ ಹೇಗೆ ಮಂಗನನ್ನು ಹತೋಟಿಗೆ ತಂದು ಕುಣಿಯಲು ಕಲಿಸಬಹುದೋ ಹಾಗೆಯೇ ಮನಸ್ಸನ್ನು ಹತೋಟಿ ಯಲ್ಲಿಟ್ಟು ಸಾಧಿಸಬೇಕಾದದನ್ನು ಸಾಧಿಸಬಹುದು. ಇದಕ್ಕೆ ನಮ್ಮ ಯೋಗ ಮತ್ತು ಶಾಸ್ತ್ರೀಯ ಸಂಗೀತ ಮುಂತಾದವುಗಳು ಅತ್ಯಂತ ಸಹಾಯಕಾರಿ ಎಂದರು.
ಐನ್‌ಸ್ಟಿನ್‌ನಿಂದ ಹಿಡಿದು ಡಾ.ಅಬ್ದುಲ್‌ಕಲಾಂರವರೆಗೆ ಬಹಳಷ್ಟು ಮಹಾಸಾಧಕರು ಸಂಗೀತ ಕಲಾವಿದರೂ ಕೂಡಾ ಆಗಿದ್ದರು ಎಂಬುದನ್ನು ವಿವರಿಸಿದ ಅವರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯೋಗ, ಸಂಗೀತ ಮುಂತಾದವನ್ನು ಕಲಿತು ಬದುಕಿನಲ್ಲಿ ಅಭಿವೃದ್ಧಿ ಪಡೆಯಲೆಂದು ಆಶಿಸಿದರು.
ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸಿದ್ಧಾರ್ಥ ಜೆ. ಶೆಟ್ಟಿ, ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್, ಕಾರ್ಯಕ್ರಮ ಸಂಯೋಜಿಸಿದ ಆಡಳಿತ ಮಂಡಳಿ ಸದಸ್ಯರಾದ ರಾಕೇಶ್ ಎಸ್ ಸೋನ್ಸ್ ಉಪಸ್ಥಿತರಿದ್ದರು.
ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ ಸ್ವಾಗತಿಸಿದರು. ರಾಕೇಶ್ ಎಸ್. ಸೋನ್ಸ್, ಡಾ. ಕಿರಣ್ ಸೇಥ್‌ರನ್ನು ಪರಿಚಯಿಸಿದರು. ಐಎಂಜೆಐಎಸ್‌ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ವಂದಿಸಿದರು. ಡೀನ್ ಅಮೃತ ಮಾಲಾ ಹಾಗೂ ಎಂಐಟಿಕೆಯ ಉಪಪ್ರಾಂಶುಪಾಲ ಪ್ರೊ ಮೆಲ್ವಿನ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.