ಬಂಡಾಯ ತಣಿಸಿದ ಮಧು ಬಂಗಾರಪ್ಪ: ನಾಮಪತ್ರ ಹಿಂಪಡೆದ 'ಕೈ' ಬಂಡಾಯ ಅಭ್ಯರ್ಥಿಗಳು

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಅಸಮಾಧಾನವನ್ನು ತಣಿಸುವಲ್ಲಿ ಮಾಜಿ ಶಾಸಕ,ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮಧು ಬಂಗಾರಪ್ಪ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಿಂದ ವಿ.ನಾರಾಯಣ ಸ್ವಾಮಿ,ಎಸ್.ರವಿಕುಮಾರ್ ಅವರು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದರು.ಆದರೆ ಕೊನೆ ಕ್ಷಣದಲ್ಲಿ ಮಾಜಿ ಶಾಸಕ ದಿ.ಕರಿಯಣ್ಣ ಪುತ್ರ ಡಾ.ಶ್ರೀನಿವಾಸ್ ಕರಿಯಣ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು.ಪಕ್ಷದ ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದ ರವಿಕುಮಾರ್ ಹಾಗೂ ವಿ.ನಾರಾಯಣ ಸ್ವಾಮಿ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಸೋಮವಾರ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಧು ಬಂಗಾರಪ್ಪ ಅವರು ಬಂಡಾಯ ಅಭ್ಯರ್ಥಿಗಳ ಸಭೆ ನಡೆಸಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ನಾಮಪತ್ರ ತೆಗೆದುಕೊಳ್ಳಲು ಕೊನೆಯ ದಿನವಾದ ಇಂದು(ಸೋಮವಾರ)ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದಾರೆ.ಈ ಮೂಲಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿನ ಕಾಂಗ್ರೆಸ್‌ನಲ್ಲಿನ ಗೊಂದಲ,ಭಿನ್ನಾಭಿಪ್ರಾಯ,ಬಂಡಾಯವನ್ನು ತಣಿಸಿದ್ದಾರೆ.
ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಎಐಸಿಸಿ ಸದಸ್ಯ ಮಧು ಬಂಗಾರಪ್ಪ,ಚುನಾವಣಾ ಸಮಯದಲ್ಲಿ ಹಲವರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.ಪಕ್ಷ ಕಟ್ಟಿ ಬೆಳೆಸಿದ ಹಲವರು ಟಿಕೆಟ್ ನಿರೀಕ್ಷೆ ಪಡ್ತಾರೆ. ಆದರೇ ಕೊಡೋದು ಒಬ್ಬರಿಗೆ ಮಾತ್ರ ಸಾಧ್ಯ.ಹೀಗಾಗಿ ಗ್ರಾಮಾಂತರ ಕ್ಷೇತ್ರದಲ್ಲಿನ ಗೊಂದಲ ನಿವಾರಣೆ ಮಾಡಲಾಗಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಟಿಕೆಟ್ ಗಾಗಿ ಹಲವರು ಅರ್ಜಿ ಸಲ್ಲಿಸಿದ್ದರು.ಅಂತಿಮವಾಗಿ ಕಾಂಗ್ರೆಸ್ ನಿಂದ ಡಾ.ಶ್ರೀನಿವಾಸ್ ಕರಿಯಣ್ಣ ಗೆ ಟಿಕೆಟ್ ನೀಡಲಾಗಿದೆ.ಇದರಿಂದ ಪಕ್ಷದ ಮುಖಂಡರಾದ ರವಿಕುಮಾರ್ ಹಾಗೂ ವಿ. ನಾರಾಯಣಸ್ವಾಮಿ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಪಕ್ಷಕ್ಕೆ ನಷ್ಟ ಉಂಟಾಗುತ್ತೇ ಎಂದು ಡಿಕೆ ಶಿವಕುಮಾರ್ ಮಾತಾನಾಡೋಕೆ ಹೇಳಿದ್ದರು.ಹೀಗಾಗಿ ಕಳೆದ ೨-೩ ದಿನಗಳಿಂದ ಮಾತುಕತೆ ನಡೆಸಿದ್ದೆ.ಇದೀಗ ರವಿಕುಮಾರ್ ಹಾಗೂ ನಾರಾಯಣ ಸ್ವಾಮಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದರು.
ಸಂಘಟನೆಗಾಗಿ ದುಡಿದ ಇಬ್ಬರ ಜೊತೆ ಪಕ್ಷ ಯಾವಾಗಲೂ ಇರುತ್ತದೆ.ಮುಂದಿನ ದಿನಗಳಲ್ಲಿ ಪಕ್ಷ ಅವಕಾಶ ಮಾಡಿಕೊಡುತ್ತೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ನಾಮಪತ್ರ ವಾಪಸ್ ಪಡೆದ ಇಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಟ್ಟಾಗಿ ಹೋಗ್ತೆವೆ ಎಂದರು.
ಶಿಕಾರಿಪುರದಲ್ಲಿ ಬಂಡಾಯ ಕುರಿತು ಪ್ರತಿಕ್ರಿಯಿಸಿದ ಅವರು,ಶಿಕಾರಿಪುರ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ಜೊತೆ ಸಹ ಮಾತನಾಡಬೇಕಿತ್ತು.ಆದರೆ, ಅವರು ಮಾತುಕತೆಗೆ ಸಿಗುತ್ತಿಲ್ಲ ಹಾಗಾಗೀ ಸಕ್ಸಸ್ ಆಗಿಲ್ಲ ಎಂದರು.
ಕಾಗೋಡು ಪುತ್ರಿ ಬಿಜೆಪಿ ಸೇರಿದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಗೋಡು ನಂದಿನಿ ಹೋಗಿರೋದ್ರಿಂದ ಏನು ಸಮಸ್ಯೆ ಆಗಲ್ಲ. ಒಂದು ವೋಟ್ ಕೂಡ ಮಿಸ್ ಅಗಲ್ಲ.ಯಾಕಂದ್ರೇ ಕಾಗೋಡು ತಿಮ್ಮಪ್ಪ ಅವರೇ ನಮ್ಮ ಜೊತೆಗೆ ಇದ್ದಾರೆ.ರಾಜನಂದಿನಿ ಅವರೇ ನಮಗೆ ವೋಟ್ ಹಾಕ್ತಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಎಸ್.ರವಿಕುಮಾರ್,ವಿ,ನಾರಾಯಣ ಸ್ವಾಮಿ,ಆರ್.ಪ್ರಸನ್ನಕುಮಾರ್,ಜಿಡಿ ಮಂಜುನಾಥ್,ಕಲಗೋಡು ರತ್ನಾಕರ್ ಸೇರಿದಂತೆ ಹಲವರಿದ್ದರು.