ಅಲ್ತಾಫ್ ಕುಂಪಲ ನಾಮಪತ್ರ ಹಿಂತೆಗೆತ ಪ್ರಕರಣ ಒತ್ತಡ ಕಾರಣ: ಜೆಡಿಎಸ್ ಮುಖಂಡರ ಆರೋಪ

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎ.20ರಂದು ನಾಮಪತ್ರ ಸಲ್ಲಿ ಸಿದ್ದ ಅಲ್ತಾಫ್ ಕುಂಪಲ ಅವರು ಎ.21ರಂದು ದಿಢೀರ್ ನಾಮ ಪತ್ರ ಹಿಂತೆಗೆದು ಕೊಂಡಿರುತ್ತಾರೆ. ಅವರು ನಾಮ ಪತ್ರ ಹಿಂತೆಗೆದುಕೊಳ್ಳಲು ಒತ್ತಡ ಕಾರಣ ಎಂದು ಜೆಡಿಎಸ್ ಮುಖಂಡರು ಮತ್ತು ಅಭ್ಯರ್ಥಿ ಅಲ್ತಾಫ್ ಕುಂಪಲ ಸುದ್ದಿಗೋಷ್ಠಿಯಲ್ಲಿಂದು ಆರೋಪ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಅಲ್ತಾಫ್ ಕುಂಪಲರಿಗೆ ಮಂಗಳೂರು (ಹಿಂದಿನ ಉಳ್ಳಾಲ ವಿ.ಸ ಕ್ಷೇತ್ರ) ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸೂಚನೆ ನೀಡಲಾ ಗಿತ್ತು. ಆದರೆ ನಾಮ ಪತ್ರ ಸಲ್ಲಿಸಿದ ಬಳಿಕ ಅವರಿಗೆ ಬೆದರಿಕೆಯ ಸಂದೇಶ ರವಾನಿಸಲಾಗಿದೆ. ಅವರ ಮೇಲೆ ಒತ್ತಡ ಹೇರಿ ಬಲವಂತವಾಗಿ ನಾಮಪತ್ರ ವಾಪಾಸುಪಡೆಯುವಂತೆ ಮಾಡಲಾಗಿದೆ. ಇದರ ವಿರುದ್ಧ ಚುನಾವಣಾ ಧಿಕಾರಿಗೆ ದೂರು ನೀಡಲಾಗಿದೆ. ಮುಂದೆ ಈ ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು. ಈ ರೀತಿ ಒತ್ತಡ ಹೇರಲು ಅಲ್ಲಿನ ಶಾಸಕರ ಇಬ್ಬರು ಬೆಂಬಲಿಗರು ಕಾರಣರಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ರಾದ ಎಂ.ಬಿ.ಸದಾಶಿವ ಹಾಗೂ ಮುಹಮ್ಮದ್ ಕುಂಞಿ ವಿಟ್ಲ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.
ಈ ಬಾರಿ ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ನಮ್ಮ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಾವು ಜನಪರವಾದ ಪಂಚರತ್ನ ಯೋಜನೆಯ ಮೂಲಕ ಜನರಿಗೆ ಹತ್ತಿರವಾಗಿದ್ದೇವೆ. ಜೆಡಿಎಸ್ ಹೇಳಿರುವ ಜನಪರ ಕಾರ್ಯಕ್ರಮವನ್ನು ಆಡಳಿತಕ್ಕೆ ಬರುವ ಮರುಕ್ಷಣವೇ ಜಾರಿ ಮಾಡಲು ನಾವು ಸಿದ್ಧರಿದ್ದೇವೆ. ಜನರ ಮಧ್ಯೆ ಗೊಂದಲ, ವೈಷಮ್ಯ ಮೂಡಿಸುವ ರಾಜಕೀಯ ನಾವು ಎಂದಿಗೂ ಮಾಡಿಲ್ಲ. ಕುಮಾರಸ್ವಾಮಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ನಿಶ್ಚಿತ. ಜಿಲ್ಲೆಯಲ್ಲಿ 8 ಕಡೆಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿದ್ದು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಮೊಯ್ದಿನ್ ಬಾವ ಅವರನ್ನು ಕಣಕ್ಕಿಳಿಸಿದ್ದು ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ ಎಂದು ಎಂ.ಬಿ.ಸದಾಶಿವ ತಿಳಿಸಿದ್ದಾರೆ.
ನಾಮಪತ್ರ ವಾಪಾಸು ಪಡೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ವಿವರಣೆ ನೀಡಿದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಈ ಹಿಂದೆಯೂ ಚುನಾವಣೆ ಎದುರಿಸಲು ನಾನು ಸಿದ್ಧತೆ ಮಾಡಿದ್ದೆ, ಆದರೆ ಅವಕಾಶ ದೊರೆಯಲಿಲ್ಲ. ಈ ಬಾರಿ ಅವಕಾಶ ದೊರೆತ ಕಾರಣ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿರುತ್ತೇನೆ. ಈ ನಡುವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಬೆಂಬಲಿಗರೆನ್ನಲಾದ ಇಬ್ಬರು ನನ್ನ ಮೇಲೆ ಒತ್ತಡ ಹೇರಿ, ಬೆದರಿಕೆ ಹಾಕಿ ಬಲವಂತವಾಗಿ ನಾಮಪತ್ರ ಹಿಂತೆಗೆದು ಕೊಳ್ಳುವಂತೆ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸುವಂತೆ ಮಾಡಿದ್ದಾರೆ. ನನಗೆ ಈಗಲೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಚ್ಛೆ ಇದೆ. ಆದ್ದರಿಂದ ಸಿಂಧುತ್ವಗೊಂಡಿರುವ ನಾಮಪತ್ರ ವನ್ನು ಹಿಂದೆಗೆದು ಕೊಳ್ಳಲು ನೀಡಿರುವ ಪತ್ರವನ್ನು ಹಿಂಪಡೆಯಲು ಅವಕಾಶ ಮಾಡಿಕೊಡಬೇಕೆಂದು ಎಪ್ರಿಲ್ 24ರಂದು ಮತ್ತೊಮ್ಮೆ ಅರ್ಜಿ ಸಲ್ಲಿಸಿರುವುದಾಗಿ ಅಲ್ತಾಫ್ ತಿಳಿಸಿದ್ದಾರೆ.
ಅಲ್ತಾಫ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿರು ವಂತೆ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರಾದ ಮುಸ್ತಾಫ, ಉಸ್ಮಾನ್, ರಿಯಾಝ್ ಎಂಬವರು ನಾಮಪತ್ರ ಹಿಂದೆಗೆಯಲು ಒತ್ತಡ ಹೇರಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ವಾಸದ ಮನೆಗೆ ಬಂದು ರಾತ್ರಿ ಬೆದರಿಕೆ ಒಡ್ಡಿ ದ್ದಾರೆ. ನನಗೆ ಮತ್ತು ನನ್ನ ಮನೆಯ ಸದಸ್ಯರಿಗೆ ಜೀವ ಭಯದ ವಾತಾವರಣ ಸೃಷ್ಟಿಸಿದ್ದಾರೆ. ನಾನು ಉಮೇದು ವಾರಿಕೆ ವಾಪಾಸು ಪಡೆದಿರುವುದು ನನ್ನ ಸ್ವಂತ ಇಚ್ಛೆಯಿಂದ ಅಲ್ಲ. ಕಾಂಗ್ರೆಸ್ ಪಕ್ಷದ ಬೆಂಬಲಿಗರು ನನ್ನನ್ನು ಹೆದರಿಸಿ, ಒತ್ತಡ ಹೇರಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ. ನಾನು ನಾಮ ಪತ್ರ ಹಿಂಪಡೆಯುವ ಸಂದರ್ಭದಲ್ಲಿ ನನ್ನ ಅನುಮೋದಕರಿಗೆ ಮತ್ತು ಬೆಂಬಲಿಗರೊಂದಿಗೆ ಚರ್ಚಿಸಲು ಅವಕಾಶ ನೀಡಲಿಲ್ಲ ಎಂದು ದೂರು ನೀಡಿರುವುದಾಗಿ ಅಲ್ತಾಫ್ ತಿಳಿಸಿದ್ದಾರೆ.
ನಾನು ಯಾವುದೇ ಹಣದ ಆಮಿಷಕ್ಕೆ ಒಳಗಾಗಿ ನಾಮ ಪತ್ರ ವಾಪಸ್ ಪಡೆದಿಲ್ಲ. ಕೋವಿಡ್ ಸಂದರ್ಭದಲ್ಲಿ ಜನರಿಗಾಗಿ ಸೇವೆ ಸಲ್ಲಿಸಿರುವುದಾಗಿ ಅಲ್ತಾಫ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ನಝೀರ್ ಉಳ್ಳಾಲ, ವಸಂತ ಪೂಜಾರಿ, ಅಕ್ಷಿತ್ ಸುವರ್ಣ, ಅಶ್ರಫ್ ಸಾಜಿದ್, ಅಶ್ರಫ್ ಖಾಝಿ, ಫೈಝಲ್ ಮೊದಲಾದವರು ಉಪಸ್ಥಿತರಿದ್ದರು.