ದಕ್ಷಿಣ ಸಿರಿಯಾದ ಮೇಲೆ ಇಸ್ರೇಲ್ ವಾಯುದಾಳಿ

ಬೈರೂತ್, ಎ.24: ದಕ್ಷಿಣ ಸಿರಿಯಾದಲ್ಲಿ, ಇಸ್ರೇಲ್ ಆಕ್ರಮಿತ ಗೊಲಾನ್ ಹೈಟ್ಸ್ ಬಳಿ ಇರಾನ್ ಪರ ಹೋರಾಟಗಾರರ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ವಾಯುದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಕ್ಯುನೆಟ್ರದ ಹೊರವಲಯದಲ್ಲಿ ಇಸ್ರೇಲ್‍ನ ಸೇನೆಯು `ಗೊಲಾನ್ ಹೈಟ್ಸ್ ಪ್ರದೇಶದ ವಿಮೋಚನೆಗಾಗಿನ ಸಿರಿಯಾ ಪಡೆ'ಯ ನೆಲೆಯನ್ನು ಗುರಿಯಾಗಿಸಿ ಬಾಂಬ್‍ದಾಳಿ ನಡೆಸಿದೆ ಎಂದು ಮಾನವ ಹಕ್ಕುಗಳ ಸಿರಿಯಾ ಸಂಸ್ಥೆಯ ಹೇಳಿಕೆ ತಿಳಿಸಿದೆ. ಇರಾನ್ ಬೆಂಬಲಿತ, ಹಿಜ್ಬತುಲ್ಲಾ ಜತೆ ಸಂಪರ್ಕವಿರುವ ಈ ತಂಡವನ್ನು ಇಸ್ರೇಲ್ ಆಕ್ರಮಿತ ಪ್ರದೇಶದ ಮೇಲೆ ಆಕ್ರಮಣ ಎಸಗಲು ರಚಿಸಲಾಗಿದೆ.
1967ರಲ್ಲಿ 6 ದಿನ ನಡೆದ ಯುದ್ಧದಲ್ಲಿ 1,200 ಚದರ ಕಿ.ಮೀ ವ್ಯಾಪ್ತಿಯ ಈ ಪ್ರದೇಶವನ್ನು ಇಸ್ರೇಲ್ ವಶಕ್ಕೆ ಪಡೆದಿತ್ತು ಮತ್ತು ಲೆಬನಾನ್ ಗಡಿಭಾಗದಲ್ಲಿರುವ ಈ ಪ್ರದೇಶದಲ್ಲಿ ಇಸ್ರೇಲ್ ಯೋಧರು ಗಸ್ತು ತಿರುಗುತ್ತಿದ್ದಾರೆ. ಬಳಿಕ ಇದನ್ನು ಇಸ್ರೇಲ್ ಸ್ವಾಧೀನಪಡಿಸಿಕೊಂಡಿತ್ತು, ಆದರೆ ಅಂತರಾಷ್ಟ್ರೀಯ ಸಮುದಾಯ ಇದನ್ನು ಮಾನ್ಯ ಮಾಡಿಲ್ಲ. 2018ರಲ್ಲಿ ಕ್ಯುನೆಟ್ರದ ದಕ್ಷಿಣ ಭಾಗದ ನಿಯಂತ್ರಣವನ್ನು ಸಿರಿಯನ್ ಸೇನೆ ಮರಳಿ ಪಡೆದಿತ್ತು.