ನಾಮಪತ್ರ ಹಿಂಪಡೆದ ಕೊಳ್ಳೇಗಾಲ BSP ಅಭ್ಯರ್ಥಿ: ಕಾಂಗ್ರೆಸ್ ಗೆ ಬೆಂಬಲ
''ಬಿಜೆಪಿಯ ಎನ್.ಮಹೇಶ್ ಸೋಲಿಸಲು ನಿರ್ಧಾರ''

ಚಾಮರಾಜನಗರ,ಎ.24: ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿ ರೇಖಾ ಅವರು ತಮ್ಮ ನಾಪಮತ್ರ ವಾಪಸ್ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ದಿಢೀರ್ ಬೆಳವಣಿಗೆಯಲ್ಲಿ ರೇಖಾ ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದು, ಹೈಕಮಾಂಡ್ ಸೂಚನೆಯಂತೆ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಎನ್.ಮಹೇಶ್ ಗೆಲ್ಲುವುದರೊಂದಿಗೆ ವಿಧಾನಸಭೆಯಲ್ಲಿ ಬಿಎಸ್ ಪಿ ಖಾತೆ ತೆರೆದಿತ್ತು. ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಬಿಜೆಪಿ ಸೇರಿದ್ದರು. ಈ ಬಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
''ಎನ್.ಮಹೇಶ್ ಸೋಲಿಸುವ ಗುರಿ''
''ಪಕ್ಷಕ್ಕೆ ಮೋಸ ಮಾಡಿರುವ ಎನ್.ಮಹೇಶ್ ಅವರನ್ನು ಸೋಲಿಸುವ ಗುರಿಯೊಂದಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಬಿಎಸ್‌ಪಿಯು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಬೆಂಬಲಿಸಲಿದೆ'' ಎಂದು ಬಿಎಸ್‌ಪಿ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.





