ಅಮಝಾನ್ ಬುಡಕಟ್ಟು ಮಹಿಳೆಗೆ ಗೋಲ್ಡ್‍ಮನ್ ಪರಿಸರ ಪ್ರಶಸ್ತಿ

ಬ್ರೆಸೀಲಿಯಾ, ಎ.24: ಅಮಝಾನ್‍ನ ಐದನೇ ದೊಡ್ಡ ಉಪನದಿ ಜಲಾನಯನ ಪ್ರದೇಶದಲ್ಲಿ ಸೋಯಾಬೀನ್ ರಫ್ತುಗಳನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿರುವ ದೊಡ್ಡ ಪ್ರಮಾಣದ ಯೋಜನೆಗಳ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ ಅಮಝಾನ್‍ನ ಮುಂಡುರುಕು ಬುಡಕಟ್ಟಿನ ಮುಖಂಡೆ ಅಲೆಸಾಂಡ್ರಾ ಕೊರಾಪ್‍ರನ್ನು ಪ್ರತಿಷ್ಟಿತ ಗೋಲ್ಡ್‍ಮನ್ ಪರಿಸರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1980ರ ಮಧ್ಯಭಾಗದಲ್ಲಿ (ಅಲೆಕ್ಸಾಂಡ್ರಾ ಕೊರಾಪ್ ಜನಿಸಿದ ಸಂದರ್ಭ) ಬ್ರೆಝಿಲ್‍ನ ಅಮಝಾನ್ ಮಳೆಕಾಡು ಏಕಾಂತಪ್ರಿಯರ ಸ್ವರ್ಗವಾಗಿತ್ತು. ಆದರೆ ಕ್ರಮೇಣ ಹೆದ್ದಾರಿ, ರಸ್ತೆ ಯೋಜನೆಗಳಿಗಾಗಿ ಮಳೆಕಾಡನ್ನು ಒತ್ತುವರಿ ಮಾಡುವುದು ಮುಂದುವರಿಯಿತು. ಈ ಪ್ರದೇಶದಲ್ಲಿ ನಿರ್ಮಿಸಲಾದ ಎರಡು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ ಮಾಡುವವರು, ಸಾವಿರಾರು ವಸಾಹತುಗಾರರನ್ನು ನೆಲೆಗೊಳಿಸಿತು.ಈ ಅಕ್ರಮ ಚಟುವಟಿಕೆ ಸುಮಾರು 14000ದಷ್ಟಿದ್ದ ಮುಂಡುರುಕು ಸಮುದಾಯದ ಅಸ್ತಿತ್ವಕ್ಕೇ ಬೆದರಿಕೆ ಒಡ್ಡಿತ್ತು.
ಇದನ್ನು ವಿರೋಧಿಸಿ, ತನ್ನ ಸಮುದಾಯದವರ ರಕ್ಷಣೆಯ ಜವಾಬ್ದಾರಿಯನ್ನು ಅಲೆಕ್ಸಾಂಡ್ರಾ ಕೊರಾಪ್ ಹಾಗೂ ಇತರ ಮಹಿಳೆಯರು ಹೊತ್ತುಕೊಂಡರು. ತಮ್ಮ ಸಮುದಾಯದವರನ್ನು ಸಂಘಟಿಸಿ, ಪರಿಸರ ರಕ್ಷಣೆಗಾಗಿ ಮಾಡಿರುವ ಕಾರ್ಯವನ್ನು ಪರಿಗಣಿಸಿ ಪ್ರತಿಷ್ಟಿತ ಗೋಲ್ಡ್‍ಮನ್ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.