ಸುಡಾನ್ ಸಂಘರ್ಷದಲ್ಲಿ 413 ಮಂದಿ ಮೃತ್ಯು: ವಿಶ್ವ ಆರೋಗ್ಯ ಸಂಸ್ಥೆ

ಜಿನೆವಾ, ಎ.24: ಸುಡಾನ್‍ನಲ್ಲಿ ಈಗ ನಡೆಯುತ್ತಿರುವ ಸಂಘರ್ಷದಲ್ಲಿ 413 ಮಂದಿ ಮೃತಪಟ್ಟಿದ್ದು 3,551 ಮಂದಿ ಮೃತಪಟ್ಟಿರುವುದಾಗಿ ವಿಶ್ವ ಆರೋಗ್ಯಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ ಟರ್ಕಿಯ `ಅನದೊಲು' ಸುದ್ಧಿಸಂಸ್ಥೆ ವರದಿ ಮಾಡಿದೆ.
ಸುಡಾನ್‍ನ ಆರೋಗ್ಯ ಸಚಿವಾಲಯದ ಪ್ರಕಾರ, ಸಂಘರ್ಷ ಆರಂಭಗೊಂಡಂದಿನಿಂದ 20 ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ್ದರೆ, 12 ಸಂಸ್ಥೆಗಳ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುವ ಹಂತದಲ್ಲಿದೆ. ಸಂಘರ್ಷ ಆರಂಭಗೊಂಡಂದಿನಿಂದ ಇದುವರೆಗೆ ಆರೋಗ್ಯ ಕೇಂದ್ರಗಳನ್ನು ಗುರಿಯಾಗಿಸಿ 11 ದಾಳಿ ನಡೆದಿರುವುದು ದೃಢಪಟ್ಟಿದೆ.
ಸಂಘರ್ಷದಲ್ಲಿ ಗಾಯಗೊಂಡವರಷ್ಟೇ ಅಲ್ಲ, ಅದಕ್ಕೂ ಮೊದಲಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರೂ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯಸಂಸ್ಥೆಯ ವಕ್ತಾರೆ ಮಾರ್ಗರೆಟ್ ಹ್ಯಾರಿಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಇದೇ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್)ಯ ವಕ್ತಾರ ಜೇಮ್ಸ್ ಎಲ್ಡರ್ ` ಎಂದಿನಂತೆ, ಈ ಸಂಘರ್ಷವು ಮಕ್ಕಳಿಗೆ ವಿನಾಶಕಾರಿಯಾಗಿ ಪರಿಣಮಿಸಿದೆ.
ಇದುವರೆಗೆ ಕನಿಷ್ಟ 9 ಮಕ್ಕಳು ಸಾವನ್ನಪ್ಪಿದ, ಕನಿಷ್ಟ 50ರಷ್ಟು ಮಕ್ಕಳು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಸುಮಾರು 50,000 ಮಕ್ಕಳಿಗೆ ಜೀವರಕ್ಷಕ ನಿರ್ಣಾಯಕ ಔಷಧಗಳ ಕೊರತೆಯ ಅಪಾಯ ಎದುರಾಗಿದೆ. ಸುಡಾನ್‍ನಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಈಗಾಗಲೇ ಗರಿಷ್ಟ ಮಟ್ಟದಲ್ಲಿದೆ. ಈಗ ಸಂಘರ್ಷದ ಕಾರಣ ಆರೋಗ್ಯ ರಕ್ಷಕ ಸೇವೆಗಳಿಗೆ ಅಡ್ಡಿಯಾಗಿದೆ. ಸಂಘರ್ಷವು ದೇಶದ ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ. ಸಂಘರ್ಷ ಮುಂದುವರಿದರೆ ಅದಕ್ಕೆ ಮಕ್ಕಳು ಬೆಲೆ ತೆರಬೇಕಾಗುತ್ತದೆ' ಎಂದಿದ್ದಾರೆ.
ದೇಶದ ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಸುಡಾನ್‍ನಲ್ಲಿ ಭೀಕರ ಸಂಘರ್ಷ ನಡೆಯುತ್ತಿದ್ದು ಜನತೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಹಲವು ಮಂದಿ ನೀರು, ವಿದ್ಯುಚ್ಛಕ್ತಿ ಲಭಿಸದೆ ಕಂಗಾಲಾಗಿದ್ದಾರೆ. ಆಹಾರ, ಔಷಧದ ಕೊರತೆಯೂ ಹೆಚ್ಚಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸುಮಾರು 40 ದಶಲಕ್ಷ ಡಾಲರ್‍ನಷ್ಟು ಮೌಲ್ಯದ ಲಸಿಕೆ, ಇಂಜೆಕ್ಷನ್‍ಗಳು ಹಾಳಾಗುವ ಅಪಾಯದಲ್ಲಿವೆ ಎಂದು ಎಲ್ಡರ್ ಹೇಳಿದ್ದಾರೆ.
ಈ ಮಧ್ಯೆ ಸಂಘರ್ಷ ತೀವ್ರಗೊಂಡಿರುವುದರಿಂದ ಶಾಲೆಗಳಲ್ಲಿ ಮತ್ತು ಶಿಶುವಿಹಾರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳನ್ನು ಅಲ್ಲಿಂದ ತುರ್ತಾಗಿ ಸ್ಥಳಾಂತರಗೊಳಿಸುವ ಅಗತ್ಯವಿದೆ. ಸುಡಾನ್‍ನಲ್ಲಿ ಸಂಘರ್ಷ ಭುಗಿಲೇಳುವ ಮುನ್ನವೇ ಆ ದೇಶಕ್ಕೆ ಮಾನವೀಯ ನೆರವಿನ ಅಗತ್ಯ ಹೆಚ್ಚಿತ್ತು. ಸುಮಾರು 75%ದಷ್ಟು ಮಕ್ಕಳು ತೀವ್ರ ಬಡತನದ ಅಂಚಿನಲ್ಲಿದ್ದಾರೆ ಎಂದು ಯುನಿಸೆಫ್ ಹೇಳಿದೆ.







