ಮಕ್ಕಳ ಸಾಹಿತ್ಯ: ಈ ಕಾಲದ ಆಶಯಗಳು
ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎನ್ನುವ ಹೇಳಿಕೆಯಿಂದ ಮುಂದುವರಿದು ಇಂದಿನ ಮಕ್ಕಳು ಇಂದಿನ ಪ್ರಜೆಗಳೆ ಎನ್ನುವ ಹಂತಕ್ಕೆ ಇಂದು ಬರಲಾಗಿದೆ. ಆದರೆ ಅಂತಹ ಶ್ರೇಷ್ಠಮಯ ಇಂದಿನ ಪ್ರಜೆಗಳನ್ನು ಯಾವ ರೀತಿ ನೋಡಲಾಗುತ್ತಿದೆ ಎನ್ನುವ ಪ್ರಶ್ನೆ ಹಾಕಿಕೊಂಡರೆ ನಿಟ್ಟುಸಿರು ಮಾತ್ರ ಅದಕ್ಕೆ ಉತ್ತರ ಎನ್ನುವಂತಹ ಪರಿಸ್ಥಿತಿ ಇದೆ. ಪ್ರತಿಯೊಬ್ಬರೂ ತಮ್ಮೆಲ್ಲ ಬದುಕಿನ ಶ್ರಮದ ಫಲವನ್ನು ತಮ್ಮ ಮಕ್ಕಳು ಅನುಭವಿಸಲಿ ಎಂದು ಇಚ್ಛಿಸುತ್ತಾರೆ. ಆದರೆ ನಿಜವಾಗಿ ತಮ್ಮ ಮಕ್ಕಳಿಗೆ ಅಗತ್ಯವಾಗಿರುವುದನ್ನು ಗುರುತಿಸುವಲ್ಲಿ ಎಡವುತ್ತಾರೆ. ತಮ್ಮಂತೆ ತಮ್ಮ ಮಗ ಆಗಬೇಕು ಅಥವಾ ತಮಗಿಂತ ಎತ್ತರವಾಗಬೇಕು ಎನ್ನುವ ಧಾವಂತದಲ್ಲಿ ಮಗುವಿನ ಆಸಕ್ತಿ ಸಂಪೂರ್ಣ ನಗಣ್ಯವಾಗುತ್ತಿರುವುದು ಸುಳ್ಳೇನಲ್ಲ. ಇದು ಪರೋಕ್ಷವಾಗಿ ಮಕ್ಕಳ ಸಾಹಿತ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಮಕ್ಕಳ ಸಾಹಿತ್ಯವನ್ನು ಸಾಹಿತ್ಯದ ಅತ್ಯಂತ ಪ್ರಮುಖ ಪ್ರಕಾರವಾಗಿ ಪರಿಗಣಿಸಬೇಕಾಗಿತ್ತು, ವಿಪರ್ಯಾಸವೆಂದರೆ ಪ್ರಮುಖ ಪ್ರಕಾರವಿರಲಿ ಅದನ್ನು ಇಂದಿಗೂ ಸಾಹಿತ್ಯದ ಒಂದು ಪ್ರಕಾರ ಎಂದು ಪರಿಗಣಿಸಲು ಹಿಂದೇಟು ಹಾಕಲಾಗುತ್ತಿದೆ. ಇದು ಕನ್ನಡದ್ದೊಂದೇ ಅಲ್ಲ, ಎಲ್ಲ ಭಾರತೀಯ, ಅಷ್ಟೇ ಏಕೆ ವಿಶ್ವದ ಎಲ್ಲ ಕಡೆಯೂ ಈ ಮನೋಭಾವ ಕಾಣಬಹುದಾಗಿದೆ. ಮಕ್ಕಳ ಸಾಹಿತ್ಯದ ಸ್ವರ್ಗವೆಂದೇ ಕರೆಸಿಕೊಳ್ಳುವ ಅಮೆರಿಕ ಮತ್ತು ಆ ನಿಟ್ಟಿನಲ್ಲಿರುವ ಜಪಾನ್, ಇಂಗ್ಲೆಂಡ್‌ನಂಥ ಇಂಗ್ಲಿಷ್ ಪರಿಸರದಲ್ಲಿಯೇ ಮಕ್ಕಳ ಸಾಹಿತ್ಯವನ್ನು ಮುಖ್ಯ ಧಾರೆಯಾಗಿ ವಿಶೇಷ ಮತ್ತು ಸಾಧನಾ ಕ್ಷೇತ್ರ ಎಂದು ಕರೆಯುವುದಕ್ಕೆ ಜನರ ಮನೋಸ್ಥಿತಿಗಳು ಸಿದ್ಧವಿಲ್ಲ. ಅಲ್ಲಿ ಪ್ರತ್ಯೇಕವಾದ ಆಸಕ್ತರ ಗುಂಪುಗಳಲ್ಲಿಯೇ ಮಕ್ಕಳ ಸಾಹಿತ್ಯದ ಕೆಲಸಗಳು ನಡೆಯುತ್ತಲಿವೆ. ನಮ್ಮ ಕನ್ನಡದಲ್ಲಂತೂ ಇದು ತುಸು ಹೆಚ್ಚೇ ಎನಿಸಬಹುದು. ಮಕ್ಕಳಿಗೆ ಸಂಬಂಧಿಸಿದ ಹಾಗೆ ಏನೇ ಹೆಜ್ಜೆ ಇಟ್ಟರೂ, ಏನೇ ಕೊಡುಗೆ ನೀಡಿದರೂ ಅದನ್ನು ಬಾಲಿಷವಾಗಿ ನೋಡುವ ಪ್ರವೃತ್ತಿ ನಮ್ಮ ಬುದ್ಧಿಜೀವಿಗಳಲ್ಲಿದೆ. ತಾವು ಮಕ್ಕಳಿಗಾಗಿ ಬರೆದಿದ್ದೇವೆ, ನಮ್ಮ ಪುಸ್ತಕ ಮಕ್ಕಳಿಗೆ ಆಗಿರುವಂಥದು ಅಂತೆಲ್ಲ ಹೇಳಿಕೊಳ್ಳಲಿಕ್ಕೆ ಅನೇಕ ಪ್ರತಿಷ್ಠಿತ ಲೇಖಕರಿಗೆ ಇಂದಿಗೂ ಹಿಂಜರಿಕೆ ಕಾಡುತ್ತಿದೆ. ಹಾಗೆ ನೋಡಿದರೆ ಮಕ್ಕಳಿಗಾಗಿಯೇ ಬರೆದದ್ದೆಲ್ಲ, ಮಕ್ಕಳಿಗೆ ಇಷ್ಟವಾಗುವುದರ ಜೊತೆಗೆ ದೊಡ್ಡವರಿಗೂ ಆಗುವಂಥದು ಎನ್ನುವ ಸಾಮಾನ್ಯ ಜ್ಞಾನದ ಕೊರತೆಯೂ ಇಲ್ಲಿ ಕಾಣಿಸುತ್ತದೆ. ಇಂತಹ ಸಂಕುಚಿತ ವಲಯಗಳಿಂದ ಮಕ್ಕಳ ಸಾಹಿತ್ಯವನ್ನು ಆಚೆ ತರುವ ಹಾಗೂ ಭವಿಷ್ಯದ ದೃಷ್ಟಿಕೋನವಿರಿಸಿಕೊಳ್ಳುತ್ತ ಸಾಹಿತ್ಯದ ವಿದ್ವತ್ ಜಗತ್ತಿನಲ್ಲಿ ಮುನ್ನೆಲೆಗೆ ತರಬೇಕಾದ ಕೆಲಸ ಬುದ್ಧಿಜೀವಿಗಳ ಜೊತೆ ಎಲ್ಲ ಪಾಲಕರ ಹೆಗಲಮೇಲಿದೆ.
ಮಕ್ಕಳ ಸಾಹಿತ್ಯವು ಏನೇನನ್ನು ಒಳಗೊಳ್ಳಬೇಕು ಮತ್ತು ಅದರ ಆಶಯಗಳ ಕುರಿತು ಗಂಭೀರವಾಗಿ ಚಿಂತನೆ ಚರ್ಚೆಗಳು ಅಗತ್ಯವಿದೆ. ಮಕ್ಕಳ ಸಾಹಿತ್ಯದ ಪ್ರಮುಖ ಲಕ್ಷಣ ಅದು ಮಕ್ಕಳ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಬರೆಯಲಾಗಿರುತ್ತದೆ. ಭಾಷೆ ಮತ್ತು ವಿಷಯವು ವಯಸ್ಸಿಗೆ ಅನುಗುಣವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಮಕ್ಕಳು ಮತ್ತು ಯುವ ವಯಸ್ಕರಿಗೆ ಎಂದು ಎರಡು ವಿಭಾಗದಲ್ಲಿ ಬರೆಯುವ ಪ್ರವೃತ್ತಿ ಬೆಳೆದು ಬರುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ 'ಕಿಂಡರ್‌ಕಥಾ' ಮಾಲಿಕೆ. ಬೆಂಗಳೂರಿನ ಗ್ಯೋಥೆ ಇನ್‌ಸ್ಟಿಟ್ಯೂಟ್/ಮ್ಯಾಕ್ಸ್ ಮ್ಯುಲ್ಲರ್ ಭವನ್ ತನ್ನ 'ಕಿಂಡರ್‌ಕಥಾ' ಕಾರ್ಯಕ್ರಮದಡಿಯಲ್ಲಿ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಕನ್ನಡದ ಮಕ್ಕಳ ಪುಸ್ತಕಗಳನ್ನು ಹೊರತಂದಿದೆ.
ಜ್ಯೂನಿಯರ್ ವಿಭಾಗದಲ್ಲಿ 8-12 ವರ್ಷ ವಯೋಮಾನದ ಮಕ್ಕಳಿಗಾಗಿ ಹತ್ತುಚಿತ್ರದ ಪುಸ್ತಕಗಳು ಪ್ರಕಟವಾಗಿವೆ. ಸೀನಿಯರ್ ವಿಭಾಗ ಅಂದರೆ 12ರಿಂದ 16 ವಯೋಮಾನದ ಮಕ್ಕಳು ತಾವೇ ಓದಿ ಅರ್ಥಮಾಡಿಕೊಳ್ಳುವಂತೆ ಎಂಟು ಕೃತಿಗಳಲ್ಲಿ ಮಕ್ಕಳ ಹಕ್ಕುಗಳು, ಜಂಡರ್ ಸಮಸ್ಯೆ, ಕೃಷಿ-ಪಶುಪಾಲನೆ, ಪರಿಸರ, ವಿಜ್ಞಾನ-ತಂತ್ರಜ್ಞಾನ, ಆರೋಗ್ಯ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಿಗೆ ಆದ್ಯತೆ ನೀಡಲಾಗಿರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಮಕ್ಕಳ ಸಾಹಿತ್ಯದಲ್ಲಿ ಚಿತ್ರ ಪುಸ್ತಕಗಳು(ಕಾಮಿಕ್ಸ್), ಫ್ಯಾಂಟಸಿ ಕಥೆಗಳು, ನೀತಿಕಥೆಗಳು, ನರ್ಸರಿ ರೈಮ್‌ಗಳು, ಕವನಗಳು, ನಾಟಕಗಳು, ಕಾದಂಬರಿಗಳಂತಹ ಹಲವು ಪ್ರಕಾರಗಳನ್ನು ಕಾಣಬಹುದಾಗಿದೆ. ಮಕ್ಕಳ ಸಾಹಿತ್ಯವು ಮನೋರಂಜನೆ, ಶಿಕ್ಷಣ ಮತ್ತು ಸ್ಫೂರ್ತಿ ನೀಡುವ ಗುರಿಯನ್ನು ಪ್ರಮುಖ ಆಶಯವಾಗಿ ಹೊಂದಿದೆ. ಜೊತೆಗೆ ಎಳೆಯರಲ್ಲಿ ಕಲ್ಪನೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ಆಲೋಚನೆಗಳನ್ನು ಅನ್ವೇಷಿಸಲು ಅದು ಪ್ರೋತ್ಸಾಹಿಸುತ್ತದೆ ಎನ್ನುವುದು ಸರ್ವವೇದ್ಯ. ಮಕ್ಕಳ ಸಾಹಿತ್ಯವು ಯುವ ಮನಸ್ಸುಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದರ ಜೊತೆಗೆ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮಕ್ಕಳ ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸುವ ಮಕ್ಕಳ ಸಾಹಿತ್ಯವು ಕೆಲವು ಪ್ರಮುಖ ಅಂಶಗಳನ್ನು ಒಳಗೊಂಡು ರಚನೆಯಾದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಮಕ್ಕಳ ಸಾಹಿತ್ಯವು ತೊಡಗಿಸಿಕೊಳ್ಳುವ, ವಯಸ್ಸಿಗೆ ಸರಿಹೊಂದುವ ಮತ್ತು ಸಾಂಸ್ಕೃತಿಕವಾಗಿ ಪ್ರಸ್ತುತವಾಗಿರಬೇಕು, ಜೊತೆಗೆ ಸಹಾನುಭೂತಿ, ದಯೆ ಮತ್ತು ಗೌರವದಂತಹ ಸಕಾರಾತ್ಮಕ ಮೌಲ್ಯಗಳನ್ನು ಉತ್ತೇಜಿಸುವಂತಿರಬೇಕು. ಮಕ್ಕಳು ತಮ್ಮ ಜೀವನದಲ್ಲಿ ಎದುರಿಸಬಹುದಾದ ಸಂಕೀರ್ಣ ಭಾವನೆಗಳು, ಅನುಭವಗಳು ಮತ್ತು ಸವಾಲುಗಳನ್ನು ಅನ್ವೇಷಿಸಲು ಮತ್ತು ಅರ್ಥ ಮಾಡಿಕೊಳ್ಳಲು ಒಂದು ಸಾಧನವಾಗಿಯೂ ಕಾರ್ಯನಿರ್ವಹಿಸುವಂತಿರಬೇಕು. ತಂತ್ರಜ್ಞಾನವು ಮುಂದುವರಿದಂತೆ, ಮಕ್ಕಳ ಸಾಹಿತ್ಯದ ರೂಪ ಮತ್ತು ಸ್ವರೂಪವು ವಿಕಸನಗೊಳ್ಳುತ್ತದೆ. ಡಿಜಿಟಲ್ ಮತ್ತು ಸಂವಾದವನ್ನು ಮಾಡುವ ಪುಸ್ತಕಗಳು ಹೆಚ್ಚು ಮುನ್ನೆಲೆಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಇಂದಿನ ದಿನಕ್ಕೆ ತಕ್ಕನಾಗಿ ಮಕ್ಕಳ ಸಾಹಿತ್ಯದ ಆಶಯಗಳೂ ಬದಲಾಗುತ್ತಲಿವೆ. ಅವುಗಳನ್ನು ಮಕ್ಕಳ ಸಾಹಿತ್ಯದ ಬರಹಗಾರರು ಸ್ಪಷ್ಟವಾಗಿ ಮನಗಾಣಬೇಕಿದೆ.
ಈ ಕಾಲದ ಮಕ್ಕಳ ಸಾಹಿತ್ಯದ ಆಶಯಗಳು
ಯಾವುದೇ ಪ್ರಕಾರದ ಸಾಹಿತ್ಯವಾಗಿರಲಿ ಅದು ಕಾಲಕ್ಕೆ ತಕ್ಕಂತೆ ಬದಲಾವಣೆಗೊಳ್ಳುತ್ತಿರುತ್ತದೆ. ಆ ಬದಲಾವಣೆಗೆ ಹೊಂದಿಕೊಳ್ಳದೇ ಹೋದಲ್ಲಿ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಪ್ರಸಕ್ತ ಮಕ್ಕಳ ಸಾಹಿತ್ಯವನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಇಂದಿಗೂ ಬರುವ ಹೆಚ್ಚಿನ ಕೃತಿಗಳು ನೀತಿ ಅಥವಾ ಮೌಲ್ಯವನ್ನು ಪ್ರತಿನಿಧಿಸುತ್ತವೇ ಹೊರತು ಅದರಾಚೆಗೆ ತೆರೆದುಕೊಳ್ಳುತ್ತಲೇ ಇಲ್ಲ. ಆದರೆ ಆರಂಭ ಘಟ್ಟದಲ್ಲಿ ನೀತಿ/ಮೌಲ್ಯ ಅತೀ ಅಗತ್ಯವಾಗಿತ್ತು. ಆದರೆ ವಾಸ್ತವದಲ್ಲಿ ಅದರ ಜೊತೆಗೆ ಅನೇಕ ಹೊಸ ಹೊಸ ಪರಿಕಲ್ಪನೆಗಳು ಹುಟ್ಟಿಕೊಂಡಿರುವುದನ್ನು ನಿರ್ಲಕ್ಷಿಸುವಂತಿಲ್ಲ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ. ವೈವಿಧ್ಯಮಯ ಪ್ರಾತಿನಿಧ್ಯ: ವೈವಿಧ್ಯಮಯ ಪಾತ್ರಗಳು, ಸಂಸ್ಕೃತಿಗಳು ಮತ್ತು ಅನುಭವಗಳನ್ನು ಒಳಗೊಂಡಿರುವ ಮಕ್ಕಳ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಕಾಣಿಸುತ್ತಿದೆ. ವೈವಿಧ್ಯಮಯ ಪ್ರಾತಿನಿಧ್ಯದ ಅಗತ್ಯತೆಯ ಅರಿವು ಬೆಳೆಯುತ್ತಿದೆ. ಕೀಳರಿಮೆ, ವರ್ಗ, ಜಾತಿ, ಜನಾಂಗ, ಬಡತನ ಎಂಬ ಯಾವ ತಾರತಮ್ಯವಿಲ್ಲದಂತೆ, ಸರ್ವರೂ ಇಂದು ಮಕ್ಕಳಿಗೆ ಅಗತ್ಯವಾದ ಸಾಹಿತ್ಯವನ್ನು, ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಬರೆಯಲು ಹೆಚ್ಚು ಅವಕಾಶವಿದೆ. ಇದು ಈ ಕಾಲದ ಮಹತ್ತರ ಬೆಳವಣಿಗೆ. ಆ ಮೂಲಕ ವಿಭಿನ್ನ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ ಪುಸ್ತಕಗಳು ಹೆಚ್ಚು ಜನಪ್ರಿಯವಾಗುತ್ತಲಿವೆ. ಇದು ಎಲ್ಲಾ ಹಿನ್ನೆಲೆಯ ಮಕ್ಕಳು ತಮ್ಮನ್ನು ತಾವು ಮತ್ತು ತಮ್ಮ ಅನುಭವಗಳನ್ನು, ಅವರು ಓದಿದ ಪುಸ್ತಕಗಳಲ್ಲಿ ಪ್ರತಿಬಿಂಬಿಸಲು ಪ್ರೇರಣೆ ನೀಡುತ್ತಲಿದೆ.
ಪ್ರಕೃತಿ-ಸಂಸ್ಕೃತಿ:
ಸಾಹಿತ್ಯದ ಮೂಲಕ ಮಕ್ಕಳನ್ನು ಪ್ರಕೃತಿಯೊಂದಿಗೆ ಮರುಸಂಪರ್ಕಿಸುವ ಗುರಿಯನ್ನು ಹೊಂದಿರುವ ಪರಿಕಲ್ಪನೆ ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಪರಿಸರದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯೊಂದಿಗೆ, ಹವಾಮಾನ ಬದಲಾವಣೆ, ಪರಿಸರದ ವಿಷಯಗಳನ್ನು ತಿಳಿಸುವ ಪುಸ್ತಕಗಳು ಹೆಚ್ಚಾಗುತ್ತಲಿವೆ. ಪ್ರಕೃತಿಯ ಸಂರಕ್ಷಣೆ ಮತ್ತು ಗ್ರಹದ ಮೇಲೆ ಮಾನವ ಚಟುವಟಿಕೆಯ ಪ್ರಭಾವ, ಸುಸ್ಥಿರತೆಯಂತಹ ಸಮಸ್ಯೆಗಳನ್ನು ಪರಿಹರಿಸುವ ಮಕ್ಕಳ ಪುಸ್ತಕಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಪುಸ್ತಕಗಳು ಮಕ್ಕಳಿಗೆ ಪರಿಸರದ ಮೇಲೆ ಅವರ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಮತ್ತು ಕ್ರಮ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಾ ಅವರ ಸ್ವಂತ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಲು ಸಾಧನಗಳನ್ನು ಒದಗಿಸಲು ಪ್ರಯತ್ನಿಸುತ್ತಿವೆ ಎಂದರೆ ತಪ್ಪಾಗಲಾರದು.
ಕಾಮಿಕ್ಸ್:
ಕಾಮಿಕ್ಸ್ ಪುಸ್ತಕಗಳು ಮಕ್ಕಳು ಮತ್ತು ಹದಿಹರೆಯದವರಿಗೆ ಬಹಳ ಹಿಂದಿನಿಂದಲೂ ಜನಪ್ರಿಯ ಮನರಂಜನೆಯನ್ನು ನೀಡುತ್ತಲಿವೆ. ಅವುಗಳು ಇಂದಿಗೂ ತಮ್ಮ ಪ್ರಭಾವವನ್ನು ಕಳೆದುಕೊಂಡಿಲ್ಲ. ಆದರೆ ಇವುಗಳನ್ನು ಪ್ರಸಕ್ತ ದಿನಕ್ಕೆ ಅಗತ್ಯವಾಗಿ ರಚಿಸಲು ಸಾಧ್ಯವಾಗುತ್ತಿಲ್ಲ. ಅಂದರೆ ವಾಸ್ತವದ ದಿನಗಳಿಗೆ ತಕ್ಕಂತೆ ಬಾಲಕಿಯರ ಸಬಲೀಕರಣ, ಮಕ್ಕಳ ಹಕ್ಕುಗಳು, ಬಾಲಕಾರ್ಮಿಕತೆ ನಿರ್ಮೂಲನ, ಶಿಕ್ಷಣ ಮುಂತಾದ ಅಂಶಗಳನ್ನು ಮುಖ್ಯವಾಹಿನಿಗೆ ತರುವ ರೀತಿಯಲ್ಲಿ ಕೃತಿಗಳು ರಚನೆಗೆ ಸಾಕಷ್ಟು ಅವಕಾಶವಿದೆ.
ಫ್ಯಾಂಟಸಿ:
ಪೌರಾಣಿಕ ಜಾನಪದ ಕಥೆಗಳಂತೆ ಫ್ಯಾಂಟಸಿ ಕೂಡ ರೋಚಕತೆಯನ್ನು ತಳಕುಹಾಕಿಕೊಳ್ಳುತ್ತದೆೆ. ರಂಜನೆಯ ದೃಷ್ಟಿಯಿಂದ ಫ್ಯಾಂಟಸಿಯು ಹೆಚ್ಚು ಅಕರ್ಷಕವಾಗಿ ಕಾಣುತ್ತದೆ. ಪುಟ್ಟ ಮಕ್ಕಳು ತಮ್ಮನ್ನು ಊಹಾತೀತವಾದ ಕಲ್ಪನಾಲೋಕಕ್ಕೆ ಒಯ್ಯುವ ಫ್ಯಾಂಟಸಿಯನ್ನು ಸಂಭ್ರಮದಿಂದ ಒಪ್ಪಿಕೊಳ್ಳುತ್ತಾರೆ, ಅನುಭವಿಸುತ್ತಾರೆ, ರಂಜನೆಗೆ ತಂದುಕೊಳ್ಳುತ್ತಾರೆ. ಅದನ್ನು ತಮ್ಮದೇ ಲೋಕವಾಗಿ ಪರಿಭಾವಿಸುತ್ತಾರೆ. ಇದು ತೀರಾ ಪುಟ್ಟ ಮಕ್ಕಳಿಂದ ಹಿಡಿದು ಬೆಳೆಯತ್ತಿರುವ ಮಕ್ಕಳಲ್ಲಿ ವಿಭಿನ್ನ ಮಟ್ಟದಲ್ಲಿ ನೋಡಬಹುದು. ಮಕ್ಕಳ ಬರಹಗಾರರು ತಮ್ಮ ಕೃತಿಗಳಲ್ಲಿ ಫ್ಯಾಂಟಸಿಯನ್ನು ಹೆಚ್ಚು ಬಳಸಿದ್ದಾರೆ. ಓದು ಇಷ್ಟವಿಲ್ಲದ ಓದುಗರಿಗೆ ಓದುವ ಸಂತೋಷವನ್ನು ಪರಿಚಯಿಸಲು ಇದು ಹೆಚ್ಚು ನೆರವಿಗೆ ಬರುತ್ತದೆ. ಫ್ಯಾಂಟಸಿ ವಿಭಿನ್ನವಾದ ಕಥೆ ಹೇಳುವ ವಿಧಾನವನ್ನು ಹೊಂದಿರುವುದರ ಜೊತೆಗೆ ಸಂಕೀರ್ಣ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡುವ ಬಲವಾದ ದೃಶ್ಯಗಳನ್ನು ಹೊಂದಿರುತ್ತದೆ.
ಸಾಮಾಜಿಕ ಸಮಸ್ಯೆಗಳು:
ಇಂದು ಪ್ರಕಟವಾಗುತ್ತಿರುವ ಮಕ್ಕಳ ಪುಸ್ತಕಗಳಲ್ಲಿ ಬೆದರಿಸುವಿಕೆ, ತಾರತಮ್ಯ ಮತ್ತು ಬಡತನದಂತಹ ಸಾಮಾಜಿಕ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ. ಇವುಗಳ ಮೂಲಕ ಓದುಗರಲ್ಲಿ ಜಾಗೃತಿ ಮೂಡಿಸಲು ಮತ್ತು ಸಹಾನುಭೂತಿಯನ್ನು ಬೆಳೆಸುವ ಆಶಯವನ್ನೂ ಗುರುತಿಸಬಹುದು. ಮಕ್ಕಳು ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಸಾಧನವಾಗಿ ಇಂತಹ ಮಕ್ಕಳ ಸಾಹಿತ್ಯವನ್ನು ಹೆಚ್ಚಾಗಿ ಬಳಸಬಹುದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ: ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮಕ್ಕಳ ಸಾಹಿತ್ಯದಲ್ಲಿ ಹೆಚ್ಚೆಚ್ಚು ಕಾಣುತ್ತಿದ್ದೇವೆ. ಇದರಲ್ಲಿ ಎರಡು ಬಗೆಗಳಿವೆ. ಮೊದಲನೆಯದು ಜನಪ್ರಿಯ ವಿಜ್ಞಾನ ಬರವಣಿಗೆ. ಇದು ವಿಜ್ಞಾನದಲ್ಲಿ ಹೆಚ್ಚು ನಿಖರತೆ ಹೊಂದಿದವರು, ವಿಶೇಷ ಆಸಕ್ತಿಯುಳ್ಳವರು ಮಾತ್ರ ಗಮನಿಸಿ ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ್ದಾರೆ. ಇಂತಹ ಪುಸ್ತಕಗಳು ಮಕ್ಕಳಿಗೆ ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನವನ್ನು ಮನೋರಂಜನಾತ್ಮಕವಾಗಿ ಮತ್ತು ಆಕರ್ಷಕವಾಗಿ ಪರಿಚಯಿಸುತ್ತವೆ.







