ಪಾಕ್ ಪೊಲೀಸ್ ಠಾಣೆಯಲ್ಲಿ ಸ್ಫೋಟ: 13 ಮಂದಿ ಮೃತ್ಯು
ಪೇಶಾವರ: ಪಾಕಿಸ್ತಾನದ ಉಗ್ರಗಾಮಿ ತಡೆ ಶಸ್ತ್ರಾಸ್ತ್ರ ಡಿಪೊದಲ್ಲಿ ಸಂಭವಿಸಿದ ಎರಡು ಸ್ಫೋಟ ಪ್ರಕರಣಗಳಲ್ಲಿ ಕನಿಷ್ಠ 13 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉಗ್ರಗಾಮಿ ಸಂಘಟನೆಗಳು ಧೀರ್ಘಕಾಲದಿಂದ ನಿಯಂತ್ರಣ ಹೊಂದಿದ್ದ ವಾಯವ್ಯ ಸ್ವತ್ ಕಣಿವೆ ಪ್ರದೇಶದ ಉಗ್ರಗಾಮಿ ತಡೆ ಕಚೇರಿಯಲ್ಲಿ ಈ ಭೀಕರ ಸ್ಫೋಟ ಸಂಭವಿಸಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಅಖ್ತರ್ ಹಯಾತ್ ಹೇಳಿದ್ದಾರೆ.
"ಬಹುಶಃ ವಿದ್ಯುತ್ ಸ್ಪರ್ಶದಿಂದ ಶಸ್ತ್ರಾಸ್ತ್ರಗಳ ಡಿಪೊದಲ್ಲಿ ಬೆಂಕಿ ಹತ್ತಿಕೊಂಡಿದೆ" ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ. ಇದುವರೆಗೆ ಬಾಹ್ಯದಾಳಿ ಬಗ್ಗೆ ಯಾವುದೇ ಪುರಾವೆ ಲಭ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಘಟನೆಯ ಇತರ ಆಯಾಮಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಕ್ತಾರರು ಹೇಳಿದ್ದಾರೆ.
ಭಯೋತ್ಪಾದಕ ಚಟುವಟಿಕೆಗಳು ಸಕ್ರಿಯವಾಗಿರುವ ಈ ಕಣಿವೆ ಪ್ರದೇಶದಲ್ಲಿ ಪಾಕಿಸ್ತಾನಿ ಪೊಲೀಸರು ಹಾಗೂ ಸೇನಾ ಸಿಬ್ಬಂದಿಯನ್ನು ವ್ಯಾಪಕವಾಗಿ ನಿಯೋಜಿಸಲಾಗಿದೆ.
ಸೋಮವಾರದ ಸ್ಫೋಟದಲ್ಲಿ ಮೃತಪಟ್ಟ ಬಹುತೇಕ ಮಂದಿ ಭಯೋತ್ಪಾದಕ ತಡೆ ವಿಭಾಗದ ಪೊಲೀಸರಾಗಿದ್ದಾರೆ ಎಂದು ಹಯಾತ್ ನೀಡಿದ್ದಾರೆ. ಕಟ್ಟಡದ ಅಕ್ಕಪಕ್ಕದಲ್ಲಿ ವಾಸವಿದ್ದ ಮಹಿಳೆಯರು ಮತ್ತು ಮಕ್ಕಳು ಕೂಡಾ ಮೃತಪಟ್ಟವರಲ್ಲಿ ಸೇರಿದ್ದಾರೆ.
ಇದು ಆತ್ಮಹತ್ಯಾ ದಾಳಿ ಅಥವಾ ಉಗ್ರರ ಕೃತ್ಯ ಅಲ್ಲ ಎಂದು ಭಯೋತ್ಪಾದನೆ ತಡೆ ಇಲಾಖೆಯ ಪ್ರಾದೇಶಿಕ ಮಖ್ಯಸ್ಥ ಸುಹೈಲ್ ಖಾಲಿದ್ ಹೇಳಿದ್ದಾರೆ.