ಹೆನ್ನಾಬೈಲ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಕುಂದಾಪುರ: ಹೆನ್ನಾಬೈಲ್ ನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಿಸಲಾಯಿತು. ಇಲ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಧರ್ಮಗುರು ಷಾ ಆಲಂ ರಿಝ್ವಿ ನೇತೃತ್ವದಲ್ಲಿ ಈದುಲ್ ಫಿತರ್ ನಮಾಝ್ ನಿರ್ವಹಿಸಲಾಯಿತು.
ಈ ಸಂದರ್ಭ ಈದ್ ಸಂದೇಶ ನೀಡಿದ ಷಾ ಆಲಂ ರಿಝ್ವಿ, "ಸೌಹಾರ್ದ ಮನಸ್ಥಿತಿಯು ಸುಸಂಸ್ಕೃತ ಕೌಟುಂಬಿಕ ಹಿನ್ನಲೆ ಮತ್ತು ಸದೃಢ ಶಿಕ್ಷಣದಿಂದಾಗಿ ಮೂಡುತ್ತದೆ. ಸೌಹಾರ್ದ ಇಲ್ಲದ ಜಾಗದಲ್ಲಿ ಇಂತಹ ಹಿನ್ನಲೆ ಮತ್ತು ಶಿಕ್ಷಣಗಳಿರುವುದಿಲ್ಲ. ಸಂಘರ್ಷ ಎಲ್ಲದರಲ್ಲೂ ಇದೆ. ಆದರೆ ಸೌಹಾರ್ದವು ಪ್ರಜ್ಞೆಯ ಪ್ರಭಾಮಂಡಲ ಮತ್ತು ಪ್ರಬುದ್ಧತೆಯ ಪಾರಮ್ಯದಲ್ಲಿರುವ ವ್ಯಕ್ತಿತ್ವದಿಂದ ಮಾತ್ರ ಸಾಧಿಸಲು ಸಾಧ್ಯ'' ಎಂದು ಹೇಳಿದರು.
''ಭೂಮಿಯ ಮೇಲೆ ಮನುಷ್ಯ ಹುಟ್ಟಿದಂದಿನಿಂದ ಪರಸ್ಪರ ಸಂಘರ್ಷಿಸುತ್ತಲೇ ಬಂದಿದ್ದಾನೆ. ಕಾಲಕಾಲಕ್ಕೆ ಸಂಘರ್ಷವು ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರಣಗಳ ಮೇಲೆ ನಿರಂತರವಾಗಿ ನಡೆದುಬಂದಿದೆ ಮಾತ್ರವಲ್ಲ, ಮುಂದೆಯೂ ನಡೆಯುತ್ತದೆ. ನಮ್ಮೊಳಗಿನ ಮನಸ್ಸೂ ಕೂಡ ಆಗಾಗ ತನ್ನೊಳಗೇ ಸಂಘರ್ಷವನ್ನು ಕಾಣುತ್ತದೆ'' ಎಂದವರು ತಿಳಿಸಿದರು.
''ಸದ್ಯದ ಜಗತ್ತಿನಲ್ಲಿ ಸಂಘರ್ಷ ಸರ್ವವ್ಯಾಪಿಯಾಗಿದೆ. ರಮಝಾನ್ ಉಪವಾಸವು ಉಪವಾಸಿಗನ ಅಂತಃಶಕ್ತಿ ಮತ್ತು ಅಂತಃಸತ್ವವನ್ನು ವರ್ಧಿಸುವುದರ ಮೂಲಕ ಸಂಘರ್ಷಮಯ ಜಗತ್ತಿನಲ್ಲಿ ಸಂಯಮ ಸೌಹಾರ್ದದಿಂದ ಬದುಕುವ ಪಾಠವನ್ನು ಕಲಿಸುತ್ತದೆ. ವ್ರತಾಚರಣೆಯ ಉದ್ದೇಶ ಬರೀ ಉಪವಾಸವಲ್ಲ. ದಮನ ಶೋಷಣೆ ಅಪಮಾನಗಳ ವಿರುದ್ಧ ಸಂಯಮದಿಂದ ಶಾಂತಿ ಮಾರ್ಗದಿಂದ ಪ್ರತಿಕ್ರಿಯಿಸಲು ಕಲಿಸುವ ಒಂದು ಪ್ರಾಯೋಗಿಕ ವೇದಿಕೆಯೂ ಆಗಿದೆ. ಒಂದು ತಿಂಗಳ ಕಠಿಣ ಉಪವಾಸ ವೃತ ಮುಗಿಸಿ ಹಬ್ಬದ ಸಂಭ್ರಮವನ್ನು ಆಚರಿಸುವ ಹೊತ್ತಿನಲ್ಲಿ, ಜಗತ್ತಿನ ಹಸಿದ ಹೊಟ್ಟೆಗಳ ಬಗ್ಗೆ, ವಯೋವೃದ್ಧ ಜೀವಗಳ ಬಗ್ಗೆ, ಧರ್ಮ, ಜಾತಿ, ವರ್ಣಗಳ ಕಾರಣದಿಂದ ಶೋಷಣೆ- ದಮನಿತರ ಬಗ್ಗೆಯೂ ಪ್ರತಿಯೊಬ್ಬ ಮುಸ್ಲಿಮನ ಮನಸ್ಸು ಮಿಡಿಯಬೇಕು. ಅಂತಹ ಭಾವನೆ ಇದ್ದರೆ ಮಾತ್ರ ಪ್ರಾರ್ಥನೆಯ ಪ್ರತಿಫಲವನ್ನು ಸೃಷ್ಟಿಕರ್ತ ನೀಡುವನು" ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಹಸನ್ ಸಾಹೇಬ್, ಮಾಜಿ ಅಧ್ಯಕ್ಷ ಸೈಯದ್ ಅಬ್ಬಾಸ್ , ಹಯಾತ್ ಬಾಷಾ, ಅಬ್ಬಾಸ್ ಅಲಿ, ಇಬ್ರಾಹೀಂ ಸಯ್ಯದ್, ಅಶ್ಫಾಕ್ ಸಾಬ್ಜನ್, ಆದಂ ಸಾಹೇಬ್, ಅಮಾನ್ ಜಮಾಲ್, ಶಬ್ಬೀರ್ ಸಾಹೇಬ್, ಸೈಯದ್ ರಫೀಕ್, ಸೈಯದ್ ಆರಿಫ್, ಬಾವಾ ಸಾಹೇಬ್, ಅಲ್ತಾಫ್ ಅಲಿ, ಅರ್ಷದ್ ಅಬ್ಬಾಸ್, ರಿಹಾನ್ ಆಹ್ಮದ್, ಮುಹಮ್ಮದ್ ರಫೀಕ್, ಸಲೀಮ್ ಮೌಲಾಲಿ ಮುಂತಾದವರು ಉಪಸ್ಥಿತರಿದ್ದರು.







